ನೆಲ್ಯೊಟ್ಟು ಗುಡ್ಡದಲ್ಲಿ ದೈವಗಳಿಗೆ ತಂಬಿಲ ಸೇವೆ:ಪ್ರಾಯಶ್ಚಿತದಿಂದ ಆರಂಭವಾದ ಸೇವೆ

ಕಡಬ, ಜೂ.೧೧- ಕೊಲ ಗ್ರಾಮದ ನೆಲ್ಯೊಟ್ಟು ಎಂಬಲ್ಲಿನ ಗುಡ್ಡದಲ್ಲಿ ನೆಲೆಯೂರಿದೆ ಎನ್ನಲಾದ ದೈವಗಳಿಗೆ ತಂಬಿಲ ಸೇವೆ ಗುರುವಾರ ನಡೆಯಿತು. ಭಕ್ತರ ತನು ಮನ ಧನ ಸಹಾಯದಿಂದ ಮೂರು ವರ್ಷದ ಹಿಂದೆ ಪ್ರಾಯಶ್ಚಿತವಾಗಿ ಆರಂಭವಾದ ಸೇವೆ ನಾಲ್ಕನೇ ವರ್ಷದಲ್ಲಿ ಕೋವಿಡ್ ನಿಯಮ ಪಾಲನೆಯೊಂದಿಗೆ ಸರಳ ರೀತಿಯಲ್ಲಿ ನಡೆಯಿತು.
ಗೋಳಿತ್ತಡಿ- ಏಣಿತ್ತಡ್ಕ- ಕುದುಲೂರು ರಸ್ತೆಯ ನೆಲ್ಯೊಟ್ಟು ಎಂಬಲ್ಲಿ ರಸ್ತೆಯ ಮಗ್ಗುಲಲ್ಲಿರುವ ಹಾಳೆ ಮರದ ಬುಡದಲ್ಲಿ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಈ ಭಾಗದ ರಿಕ್ಷಾ , ಜೀಪು ಚಾಲಕರು, ಭಕ್ತ್ತಾಧಿಗಳು ಮುಂದಾಗಿ ವಿವಿಧ ರೂಪದ ದಾನಗಳನ್ನು ನೀಡಿ ಸೇವೆ ನಡೆಸಿಕೊಟ್ಟರು.
ಪ್ರಾಯಶ್ಚಿತ್ತದಿಂದ ಆರಂಭವಾಯಿತು ತಂಬಿಲ ಸೇವೆ
ಮೂರು ವರ್ಷದ ಹಿಂದೆ ಗೋಳಿತ್ತಡಿ – ನೆಲ್ಯೊಟ್ಟು ರಸ್ತೆ ಮರುಡಾಮರಿಕರಣ ಆರಂಭವಾದಾಗ ರಸ್ತೆಯಂಚಿನಲ್ಲಿದ್ದ ಕಾರುಣಿಕತೆಯಿದೆ ಎನ್ನಲಾದ ಹಾಳೆ ಮರವನ್ನು ಉರುಳಿಸಲಾಯಿತು. ಇದಾದ ಬಳಿಕ ಹಲವು ವಿಘ್ನಗಳು ಎದುರಾಯಿತು. ರಸ್ತೆ ಕಾಮಾಗಾರಿ ಸಂಪೂರ್ಣಗೊಳಿಸಲು ಅಸಾದ್ಯವಾಯಿತು ಎನ್ನಾಗಿದ್ದು ಹಾಗಾಗಿ ಪ್ರಶ್ನಾಚಿಂತನೆ ನಡೆಸಿ ರಸ್ತೆಯ ಇನ್ನೊಂದು ಬದಿಯ ಪಕ್ಕದಲ್ಲಿರುವ ಹಾಳೆ ಮರದ ಬುಡದಲ್ಲಿ ದೋಷ ಪರಿಹಾರರ್ಥವಾಗಿ ಸೇವೆ ನೀಡುವಂತೆ ಜ್ಯೋತಿಷಿಗಳ ಸಲಹೆಯಂತೆ ತಂಬಿಲ ಸೇವೆ ಆರಂಭವಾಯಿತು.
ಭಕ್ತರೆ ಇಲ್ಲಿ ಸೇವೆ ನೀಡಿದರು.
ನೆಲಯೂರಿದೆ ಎನ್ನಲಾದ ಸಂಚಾರಿ ಗುಳಿಗ, ರಕ್ತೇಶ್ವರಿ, ಬ್ರಹ್ಮರಾಕ್ಷಸ ದೈವಗಳಿಗೆ ತಂಬಿಲ ಸೇವೆಯನ್ನು ರಿಕ್ಷಾ ಚಾಲಕ ರವಿ ಸಂಕೇಶ ಮುಂದಾಳತ್ವದಲ್ಲಿ ಗೋಳಿತ್ತಡಿ ರಿಕ್ಷಾ ಚಾಲಕರು, ಈ ಭಾಗದ ಜೀಪು ಚಾಲಕರು, ದಿನ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಮಂದಿ, ಭಕ್ತಾದಿಗಳು ಒಟ್ಟಾಗಿ ಈ ಭಾರಿ ಸೇವೆಯನ್ನು ನೀಡಿದರು. ಹಿರಿಯರಾದ ಗಂಗಯ್ಯ ಪೂಜಾರಿ ತಂಬಿಲ ಸೇವೆಯ ವಿಧಿ ವಿದಾನ ನೆರವೇರಿಸಿದರು.
ಕಾರುಣಿಕತೆಯ ಹಾಳೆ ಮರ
ಮೂರು ವರ್ಷದ ಹಿಂದೆ ಈ ರಸ್ತೆ ಮರುಡಾಮರಿಕರಣಕ್ಕೂ ಮುನ್ನ ಇದ್ದ ಹಾಳೆ ಮರದ ಬುಡದಲ್ಲಿ ಕಲ್ಲೊಂದು ಹಾಕಿಕೊಂಡಿತ್ತು. ವಿಶೇಷವಾಗಿ ಈ ಹಿಂದೆ ಈ ಭಾಗದ ಬಿಲ್ಲವ ಸಮೂದಾಯದ ವರ್ಗ ಶೇಂದಿಯನ್ನು ಈ ಹಾದಿಯ ಮೂಲಕ ಗೋಳಿತ್ತಡಿ ಸೇರಿದಂತೆ ಮೊದಲಾದೆಡೆಗೆ ತಲೆಯಲ್ಲಿ ಹೊತ್ತು ಸಾಗಿಸುತ್ತಿದ್ದಾಗ ಮರದ ಬುಡದಲ್ಲಿದ್ದ ಕಲ್ಲಿನ ಮೇಲೆ ಸ್ವಲ್ಪ ಶೇಂದಿಯನ್ನಿಟ್ಟು ಕೈಮುಗಿದು ಮುಂದುವರಿಯುವುದು ವಾಡಿಕೆಯಾಗಿತ್ತು. ಇಲ್ಲವಾದಲ್ಲಿ ಎಡವಟ್ಟುಗಳು ನಡೆಯುತ್ತಿತ್ತು ಎನ್ನುವುದು ನಂಬಿಕೆಯ ಮಾತಾಗಿದೆ. ಕಾಲನಂತರ ಶೇಂದಿ ತೆಗೆಯುವುದು ಕಡಿಮೆಯಾದಂತೆ ಇಲ್ಲಿನ ಸಂಪ್ರದಾಯವೂ ತೆರೆಮೆರೆಗೆ ಸರಿಯಿತು.
ಈ ಹಾಳೆ ಮರದ ಬುಡದಲ್ಲಿದ್ದ ದೈವಗಳು ಬಹಲಷ್ಟು ಕಾರುಣಿಕದಿಂದ ಕೂಡಿದೆ. ಈ ಪರಿಸರದಲ್ಲಿ ತಪ್ಪಾಗಿ ನಡೆದುಕೊಂಡರೆ ಹಲವು ವಿಘ್ನಗಳು ನಡೆದಿರು ವುದು ಕಾರುಣಿಕಕ್ಕೆ ಸಾಕ್ಷಿಯಾಗಿದೆ. ಈ ಹಿಂದೆ ಇಲ್ಲಿ ಕೈಮುಗಿಯದೆ ಶೇಂದಿ ಸಾಗಾಟ ಮಾಡುತ್ತಿದ್ದ ನನಗೂ ವಿಘ್ನ ಎದುರಾಗಿತ್ತು.
ಗಂಗಯ್ಯ ಪೂಜಾರಿ, ಹಿರಿಯರು

ನಿರಂತರ ಎರಡು ವರ್ಷ ಸೇವೆ ನಡೆದ ಬಳಿಕ ಮೂರನೇ ವರ್ಷ ಅಂದರೆ ಕಳೆದ ವರ್ಷ ಕೋವಿಡ್ ೧೯ ನಿಂದಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸೇವೆ ನೀಡಲು ಸಾಧ್ಯವಾಗಿಲ್ಲ. ಈ ಭಾರಿ ಲಾಕ್‌ಡೌನ್ ನಿಯಮ ಪಾಲನೆಯೊಂದಿಗೆ ಸರಳ ರೀತಿಯಲ್ಲಿ ಸೇವೆ ಸಲ್ಲಿಸಲಾಯಿತು.
ರವಿ ಸಂಕೇಶ, ರಿಕ್ಷಾ ಚಾಲಕ