ನೆಲಮಂಗಲ; 500 ಮನೆಗಳ ನಿರ್ಮಾಣ;ಸೋಮಣ್ಣ

ಬೆಂಗಳೂರು, ಮಾ. ೧೫- ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೫೦೦ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ವಸತಿ ಸಚಿವ ವಿ. ಸೋಮಣ್ಣ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಡಾ. ಶ್ರೀನಿವಾಸಮೂರ್ತಿಯವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೆಲಮಂಗಲ ಕ್ಷೇತ್ರದಲ್ಲಿ ೫೦೦ ಜಿ+೨ ಮನೆಗಳ ನಿರ್ಮಾಣಕ್ಕೆ ಜಾಗ ಅಗತ್ಯವಿದೆ. ಜಾಗ ನೀಡಿದರೆ ಮನೆ ನಿರ್ಮಾಣ ಕೈಗೆತ್ತಿಕೊಳ್ಳುವುದಾಗಿ ಹೇಳಿದರು.
ಆಗ ಸದಸ್ಯ ಶ್ರೀನಿವಾಸಮೂರ್ತಿ ಅವರು ೫.೫ ಎಕರೆ ಜಾಗವಿದೆ. ಕಾಮಗಾರಿ ಆರಂಭಿಸಲು ಅಡ್ಡಿ ಇಲ್ಲ ಎಂದಾಗ, ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು.
ನೆಲಮಂಗಲದಲ್ಲಿ ೨೦೦ ಮನೆಗಳನ್ನು ನಿರ್ಮಾಣ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅವರು ಹೇಳಿದರು. ಯೋಜನೆಯ ಅಂದಾಜು ಮೊತ್ತವು ೧೩.೪೯ ಕೋಟಿ ರೂ.ಗಳಾಗಿದ್ದು, ಆದಷ್ಟು ಶೀಘ್ರ ಕಾಮಗಾರಿಗಳನ್ನು ಆರಂಭಿಸುವ ಭರವಸೆಯನ್ನು ಸಚಿವ ಸೋಮಣ್ಣ ನೀಡಿದರು.