ನೆಲಮಂಗಲ ನಗರಸಭೆ ಚುನಾವಣೆ ಕೋರ್ಟ್ ಸೂಚನೆ

ನೆಲಮಂಗಲ, ಏ. ೨೭- ಮುಂದಿನ ಎರಡು ತಿಂಗಳಲ್ಲಿ ನೆಲಮಂಗಲ ನಗರಸಭೆಗೆ ಚುನಾವಣೆ ನಡೆಸುವಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ನಗರಸಭೆ ರಚನೆಗೆ ಮುನ್ನ ಪುರಸಭೆಗೆ ಆಯ್ಕೆಯಾಗಿದ್ದ ಸದಸ್ಯರುಗಳು ಹಾಗೂ ಸರ್ಕಾರ ಸಲ್ಲಿಸಿದ್ದ ಎರಡು ಮೇಲ್ಮನವಿಗಳನ್ನು ಕೋರ್ಟ್ ವಜಾ ಮಾಡಿ ೨ ತಿಂಗಳಲ್ಲಿ ಚುನಾವಣೆ ನಡೆಸಲು ಕೋರ್ಟ್ ಸೂಚಿಸಿದೆ.
ಅರಿಶಿನಕುಂಟೆ, ವಾಜರಹಳ್ಳಿ, ಬಸವನಹಳ್ಳಿ ಹಾಗೂ ವಿವಿಪುರ ಸೇರಿ ನಾಲ್ಕು ಗ್ರಾಮ ಪಂಚಾಯ್ತಿಗಳ ೧೦೮ ಸದಸ್ಯರುಗಳ ಪರವಾಗಿ ಜಕ್ಕಸಂದ್ರ ನಿವಾಸಿ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯೆ ಕಲ್ಪನಾ ಮಂಜುನಾಥ್ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ನಡೆಸಿದ್ದರು. ಇದು ಅವರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಮಾತ್ರವಲ್ಲ ನೆಲಮಂಗಲ ನಗರಸಭೆಗೆ ವಿಲೀನಗೊಂಡ ನಾಲ್ಕೂ ಗ್ರಾಮ ಪಂಚಾಯ್ತಿ ಸದಸ್ಯರುಗಳಿಗೆ ಸಂತಸವನ್ನುಂಟು ಮಾಡಿದೆ.
ಆದರೆ ನೆಲಮಂಗಲ ನಗರಸಭೆ ಆಗುವ ಮೊದಲು ಪುರಸಭೆ ಸದಸ್ಯರಾಗಲು ೨೦೧೯ರ ಮೇ ೨೬ರಲ್ಲಿ ೨೩ ವಾರ್ಡ್‌ಗಳಲ್ಲಿ ಚುನಾವಣೆಯನ್ನು ಎದುರಿಸಿ ಚುನಾಯಿತರಾಗಿದ್ದವರು ಈಗ ಪುನಹ ಆಸಕ್ತಿಯಿದ್ದರೆ ಮೀಸಲಾತಿಯ ಅನುಸಾರ ನಗರಸಭೆ ಚುನಾವಣೆಯನ್ನು ಎದುರಿಸುವಂತಾಗಿದೆ.
ಆದರೆ ಈಗಾಗಲೇ ವಾರ್ಡ್‌ಗಳು ವಿಂಗಡಣೆಯಾಗಿರುವಂತೆ ಮೀಸಲಾತಿ ಮತ್ತು ಚುನಾವಣಾ ದಿನಾಂಕವನ್ನು ಘೋಷಿಸುವುದನ್ನು ಕಾಯುವ ತವಕದಲ್ಲಿ ಭಾವಿ ಅಭ್ಯರ್ಥಿಗಳಿದ್ದಾರೆ.
: ಸರ್ಕಾರದ ಆದೇಶ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದು. ಅರ್ಜಿದಾರರ ಪರವಾಗಿ ಟಿ.ಶೇಷಗಿರಿರಾವ್ ಹಾಗೂ ಸುನೀಲ್ ರಾವ್ ವಾದ ಮಂಡಿಸಿದ್ದರು.