ನೆಲದ ಕಾನೂನಿನ್ವಯ ರಾಹುಲ್ ಲೋಕಸಭಾ ಸದಸ್ಯತ್ವ ರದ್ದು : ಅರಗ ಜ್ಞಾನೇಂದ್ರ

ಬೆಂಗಳೂರು,ಮಾ.24-ದೇಶದ ನೆಲದ ಕಾನೂನಿನ ನೆಲೆಯಲ್ಲಿ, ನ್ಯಾಯಾಲಯ ನೀಡಿದ ತೀರ್ಪಿನ ಅನುಗುಣವಾಗಿ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ನೆಲದ ಕಾನೂನಿನ ಪ್ರಕಾರ ಎಲ್ಲರೂ ಸಮಾನರು ಮತ್ತು ಕಾನೂನಿಗಿಂತ ಯಾರೂ ಮೇಲಿಲ್ಲ ಎಂಬ ಸಂದೇಶವೂ ಇದರಿಂದ ಸ್ಪಷ್ಟವಾಗಿದೆ. ಹೀಗಾಗಿ ಲೋಕಸಭಾ ಸಚಿವಾಲಯ ಕಾನೂನಿನ ಅನ್ವಯ ಕ್ರಮ ಕೈಗೊಂಡಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ನಿನ್ನೆಯಿಂದ ಅನ್ವಯವಾಗುಂತೆ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದು ಮಾಡಿ ಲೋಕಸಭಾ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಗುಜರಾತ್‍ನ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರು ಮಾಡಿದ ಮೋದಿ ಉಪನಾಮದ ಕುರಿತ ಹೇಳಿಕೆ ಹಿನ್ನೆಲೆಯಲ್ಲಿ 2 ವರ್ಷ ಜೈಲು ಶಿಕ್ಷೆ ವಿಧಿಸಿ ಜಾಮೀನು ನೀಡಿತ್ತು. ಅಲ್ಲದೆ ಈ ಸಂಬಂಧ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶ ಮಾಡಿಕೊಟ್ಟಿತ್ತು.