ನೆಲದಡಿ ವಿದ್ಯುತ್ ಪರಿವರ್ತಕ ಕೇಂದ್ರ ಲೋಕಾರ್ಪಣೆ

ನಗರದ ಮಲ್ಲೇಶ್ವರಂನಲ್ಲಿ ೫೦೦ ಕಿ.ವ್ಯಾ. ವಿದ್ಯುತ್ ಭೂಗತ ಪರಿವರ್ತಕ ಕೇಂದ್ರವನ್ನು ಇಂದು ಬೆಳಿಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿದರು. ಮಾಜಿ ಡಿಸಿಎಂ ಹಾಗೂ ಶಾಸಕ ಸಿ.ಎನ್. ಅಶ್ವತ್ಥನಾರಾಯಣ, ಮತ್ತಿತರರು ಭಾಗವಹಿಸಿದ್ದರು.

ಬೆಂಗಳೂರು, ಸೆ.೫-ದೇಶದಲ್ಲೇ ಪ್ರಪ್ರಥಮ ಬಾರಿಗೆ, ಮಲ್ಲೇಶ್ವರದಲ್ಲಿ ನಿರ್ಮಿಸಿರುವ ೫೦೦ ಕೆವಿಎ ನೆಲದಡಿಯಲ್ಲಿ ವಿದ್ಯುತ್ ಪರಿವರ್ತಕ ಕೇಂದ್ರವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಲೋಕಾರ್ಪಣೆ ಮಾಡಿದರು.ನಗರದಲ್ಲಿಂದು ಮಲ್ಲೇಶ್ವರದ ೧೫ನೇ ಅಡ್ಡ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯುತ್ ಪರಿವರ್ತಕ ಕೇಂದ್ರವನ್ನು ಪರಿಶೀಲನೆ ನಡೆಸಿ ಕಾರ್ಯಾಚರಣೆಗೆ ಕೆ.ಜೆ.ಜಾರ್ಜ್ ಚಾಲನೆ ನೀಡಿದರು. ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೇಲ್ಮಾರ್ಗದ ಎಚ್‌ಟಿ ವಿದ್ಯುತ್ ತಂತಿಗಳನ್ನು ಭೂಗತವಾಗಿ ಪರಿವರ್ತಿಸುವ ಯೋಜನೆಯನ್ನು ಬೆಸ್ಕಾಂ ಈಗಾಗಲೇ ಕಾರ್ಯಗತಗೊಳಿಸಿದೆ. ನೆಲದಡಿಯಲ್ಲಿ ಕೇಬಲ್ ಹಾಗೂ ವಿದ್ಯುತ್ ಪರಿವರ್ತಕ ವ್ಯವಸ್ಥೆಯು ಸುರಕ್ಷತೆ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಲಿದೆ ಎಂದರು.ಒಟ್ಟು ೧.೯೭ ಕೋಟಿ ವೆಚ್ಚದಲ್ಲಿ ಈ ಪರಿವರ್ತಕ ಕೇಂದ್ರವನ್ನು (ಟಿಸಿ)ಯನ್ನು ನಿರ್ಮಿಸಲಾಗಿದ್ದು. ಈ ಪೈಕಿ ಸಿವಿಲ್ ಕಾಮಗಾರಿಗೆ ೬೪ ಲಕ್ಷ ವೆಚ್ಚ ತಗಲಿದ್ದು, ಎಲೆಕ್ಟ್ರಿಕಲ್ ಕಾಮಗಾರಿಗೆ ೧.೩೩ ಕೋಟಿ ವೆಚ್ಚವಾಗಿದೆ ಎಂದು ಹೇಳಿದರು.ಇನ್ನೂ, ಈ ಕಾಮಗಾರಿ ೨೦೨೨ರ ಮೇ ೨೦ರಂದು ಆರಂಭಗೊಂಡಿತ್ತು. ಸಿವಿಲ್ ಕಾಮಗಾರಿಗೆ ಬಿಬಿಎಂಪಿ ಅನುದಾನ ಒದಗಿಸಿತ್ತು. ಮಲ್ಲೇಶ್ವರದ ೧೫ನೇ ಅಡ್ಡರಸ್ತೆ ಬಳಿ ನಿರ್ಮಿಸಿರುವ ನೆಲದಡಿಯಲ್ಲಿ ಪರಿವರ್ತಕದ ಟ್ರಾನ್ಸ್‌ಫಾರ್ಮರ್ ಉದ್ದ ೧೪ ಮೀಟರ್, ಅಗಲ ೫ ಮೀಟರ್ ಹಾಗೂ ಆಳ ೪ ಮೀಟರ್‌ಗಳಷ್ಟಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ವಿವರಿಸಿದರು. ಕಾರ್ಯಕ್ರಮದಲ್ಲಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸೇರಿದಂತೆ ಪ್ರಮುಖರಿದ್ದರು.