ನೆರೆ ಸಂತ್ರಸ್ಥರಿಗೆ ಆಹಾರ ಕಿಟ್ ವಿತರಣೆ

ಕೋಲಾರ, ನ.೨೬: ಕೋವಿಡ್ ಮತ್ತು ಪ್ರವಾಹ ಸಂತ್ರಸ್ತರ ನೆರವಿಗೆ ಭಾರತೀಯ ರೆಡ್ ಕ್ರಾಸ್ ಸೇವೆ ಮುಂದುವರಿಸುತ್ತಿದ್ದು ಶ್ಲಾಘನೀಯ ಕಾರ್ಯವಾಗಿದೆ, ಈ ದಿಸೆಯಲ್ಲಿ ಗುಣಮಟ್ಟದ ಆಹಾರದ ಕಿಟ್ ಗಳನ್ನು ಸಂತ್ರಸ್ತರಿಗೆ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಡಾ ಆರ್ ಸೆಲ್ವಮಣಿ ತಿಳಿಸಿದರು .
ತಮ್ಮ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನೀಡುತ್ತಿರುವ ಆಹಾರ ಕಿಟ್ ಗಳ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು .
ಕೋವಿಡ್ ಮತ್ತು ಪ್ರವಾಹ ಸಮಸ್ಯೆಯ ವೇಳೆ ಬಡತನ ರೇಖೆಗಿಂತ ಕಡಿಮೆ ಇರುವ ಜನರನ್ನು ಗುರುತಿಸಿ ಗೋಧಿ ಹಿಟ್ಟು, ಎಣ್ಣೆ, ಅಕ್ಕಿ ,ಬೇಳೆ ಇತರ ದಿನಸಿ ಪದಾರ್ಥಗಳನ್ನು ಹೊಂದಿರುವ ಗುಣಮಟ್ಟದ ಆಹಾರ ಕಿಟ್ ಗಳನ್ನು ಸ್ವತಃ ಪರಿಶೀಲಿಸಿ ಸಂತ್ರಸ್ತರಿಗೆ ನೀಡಲು ಅವರು ಸೂಚಿಸಿದರು .
ದುಡಿಮೆ ಇಲ್ಲದೆ ಅನೇಕರು ಕಂಗಾಲಾಗಿದ್ದಾರೆ ಇಂಥವರಿಗೆ ನೆರವು ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದ ಜಿಲ್ಲಾಧಿಕಾರಿಗಳು ಸಂಕಷ್ಟದಲ್ಲಿರುವ ಮತ್ತು ನಿರ್ಗತಿಕರಿಗೆ ಈ ರೀತಿಯ ಆಹಾರದ ಕಿಟ್ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು .
ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಕಚೇರಿಗಾಗಿ ಸ್ಥಳ ನೀಡಲು ಚಿಂತನೆ ಮಾಡಲಾಗಿದ್ದು ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು .
ನಿರಾಶ್ರಿತರು ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಭಾರತೀಯ ರೆಡ್ ಕ್ರಾಸ್ ವತಿಯಿಂದ ಹೊಲಿಗೆ ಯಂತ್ರಗಳ ವಿತರಣೆ ಗುರಿ ಹೊಂದಲಾಗಿದ್ದು , ಇದರಿಂದ ಮಹಿಳೆಯರು ಸ್ವಾವಲಂಬಿಗಳಾಗಲು ಸಾಧ್ಯ ಎಂದರು .
ಮುಂದಿನ ದಿನಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರಗಳನ್ನು ನಡೆಸಲು ಅವರು ಸೂಚಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ ಎನ್ ಗೋಪಾಲಕೃಷ್ಣ ಗೌಡ . ಉಪಸಭಾಪತಿ ಆರ್ ಶ್ರೀನಿವಾಸನ್ . ಕಾರ್ಯದರ್ಶಿ ನಂದೀಶ್ ಕುಮಾರ್ .ಕೋಶಾಧ್ಯಕ್ಷ ಜಿ ಶ್ರೀನಿವಾಸ್ . ನಿರ್ದೇಶಕರುಗಳಾದ ವಿ ಪಿ ಸೋಮಶೇಖರ್ . ಸಾದತ ನವೀದ್ ಮತ್ತಿತರರು ಉಪಸ್ಥಿತಿ ಇದ್ದರು .