ನೆರೆ ಸಂತ್ರಸ್ತರಿಗೆ ಬೆಳಕಾದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​​

ಕಲಬುರಗಿ :ನ.15: ಈ ಬಾರಿ ಮಳೆ ಹಾಗೂ ಪ್ರವಾಹದ ಅಬ್ಬರಕ್ಕೆ ನದಿ ಪಾತ್ರದ ಜನರು ಅಕ್ಷರಶಃ ನಲುಗಿದ್ದಾರೆ. ಈ ವರ್ಷ ದೀಪಾವಳಿ ಆಚರಿಸುವುದಂತು ದೂರದ ಮಾತು. ನೆರೆ ಪೀಡಿತರು ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರಿತ ಹಿರಿಯ ಸಾಹಿತಿ, ಖ್ಯಾತ ಬರಹಗಾರ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಪ್ರವಾಹ ಪೀಡಿತರ ನೋವಿಗೆ ಮಿಡಿದಿದ್ದಾರೆ‌.
ದೇಶಾದ್ಯಂತ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ಆದರೆ, ನೆರೆಪೀಡಿತ ಪ್ರದೇಶಗಳಲ್ಲಿ ಮಾತ್ರ ಹಬ್ಬದ ಸಂಭ್ರವಿಲ್ಲ. ಬೆಳಕಿನ ಹಬ್ಬ ದೀಪಾವಳಿಯಲ್ಲಿಯೂ ಸಂತ್ರಸ್ತರ ಬದುಕು ಕತ್ತಲಲ್ಲೇ ಉಳಿದುಬಿಟ್ಟಿದೆ. ಇಂತಹ ಸಂಕಷ್ಟ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮುಂದೆ ಬಂದಿದ್ದಾರೆ. ನೆರೆಪೀಡಿತ ಗ್ರಾಮವೊಂದರಲ್ಲಿ ದೀಪದ ಹಬ್ಬ ಆಚರಿಸಿದ್ದಾರೆ.
ಜೇವರ್ಗಿ ತಾಲೂಕಿನ ಇಟಗಾ ಗ್ರಾಮಕ್ಕೆ ತಮ್ಮ ತಂಡದೊಂದಿಗೆ ತೆರಳಿ ನೆರೆ ಸಂತ್ರಸ್ತರಿಗೆ ಆಹಾರದ ಕಿಟ್ ವಿತರಿಸುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಹಾಗೂ ಟೆಂಟ್ ಸಿನಿಮಾ ಶಾಲೆ ಸಂಯುಕ್ತಾಶ್ರಯದಲ್ಲಿ ನೆರೆ ಪೀಡಿತರಿಗೆ ಅಕ್ಕಿ, ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆಗಳು ಒಳಗೊಂಡಿರುವ ಆಹಾರದ ಕಿಟ್ ಜೊತೆಗೆ ದೀಪ ವಿತರಿಸೋ ಮೂಲಕ ನೆರೆ ಸಂತ್ರಸ್ತರ ಬದುಕಲ್ಲಿ ಆವರಿಸಿರುವ ಕತ್ತಲೆ ಕಳೆದು ಬೆಳಕು ಪ್ರಜ್ವಲಿಸಲಿ ಎಂದು ಹಾರೈಸಿದ್ದಾರೆ.ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ : ನಾಗತಿಹಳ್ಳಿ ಅವರು ಗ್ರಾಮಸ್ಥರಿಗೆ ದವಸ-ಧಾನ್ಯ ವಿತರಿಸುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣದತ್ತ ಸೆಳೆಯುವ ನಿಟ್ಟಿನಲ್ಲಿ ದೀಪಾವಳಿ ಉಡುಗೊರೆಯಾಗಿ ಕಲಿಕಾ ಸಾಮಗ್ರಿಗಳಾದ ನೋಟ್ ಬುಕ್, ಪೆನ್ಸಿಲ್, ಜಾಮಿಂಟ್ರಿ ಬಾಕ್ಸ್ ಹಾಗೂ ಸಿಹಿ ಹಂಚಿ ಮಕ್ಕಳಲ್ಲಿ ಚೈತನ್ಯ ಮೂಡಿಸಿದ್ದಾರೆ.