ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ

ಪಾವಗಡ, ನ. ೪- ಇಲ್ಲಿನ ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಜಪಾನಂದಜಿರವರು ಗುಲ್ಬರ್ಗಾ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗಾಗಿ ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ದು ಅಲ್ಲಿನ ಸ್ಥಳೀಯ ರೆಡ್‌ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಅಪ್ಪಾರಾವ್ ಅಕ್ಕೊಣೆ ಹಾಗೂ ರೋಟರಿ ಕ್ಲಬ್ ಅಧ್ಯಕ್ಷೆ ಡಾ.ಸುಧಾ ಹಳ್ಳಿಕಾಯ್ ಮತ್ತು ಇನ್ನರ್‍ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಲಾವಣ್ಯರವರ ನೇತೃತ್ವದಲ್ಲಿ ಅಲ್ಲಿನ ಸುಮಾರು ೨೫೦೦ ನೆರೆ ಸಂತ್ರಸ್ತ ಕುಟುಂಬಗಳಿಗೆ ವಿತರಿಸಿದರು.
ಈವರೆವಿಗೂ ಯಾವುದೇ ಸರ್ಕಾರಿ ಆಡಳಿತ ಅಥವಾ ಸರ್ಕಾರೇತರ ಸಂಸ್ಥೆಗಳು ಭೇಟಿ ನೀಡದ ಸಂಪೂರ್ಣ ಜಲಾವೃತವಾಗಿರುವ ಅತ್ಯಂತ ಕುಗ್ರಾಮಗಳಿಗೆ ಸ್ವಾಮಿ ಜಪಾನಂದಜೀ ಅತ್ಯಂತ ಕಷ್ಟದಿಂದ ತೆರಳಿ ಅಲ್ಲಿಯ ಸಂತ್ರಸ್ತರಿಗೆ ಸಾಂತ್ವನ ಹೇಳಿ, ಪರಿಹಾರ ಸಾಮಗ್ರಿ ವಿತರಿಸಿದರು.
ಈ ಯೋಜನೆಗೆ ಸರ್ವ ರೀತಿಯಲ್ಲಿ ಪ್ರಾಯೋಜಕತ್ವವನ್ನು ನೀಡಿದ ಸುಧಾಮೂರ್ತಿ ಮತ್ತು ಇನ್ಫೋಸಿಸ್ ಫೌಂಡೇಷನ್ ಮತ್ತು ಅನುಷ್ಠಾನರೂಪಕ್ಕೆ ತಂದ ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡದ ಸಮಯೋಚಿತ ಕಾರ್ಯವೈಖರಿಯನ್ನು ಉತ್ತರ ಕರ್ನಾಟಕದ ಜನತೆ ಹೃತ್ಪೂರ್ವಕವಾಗಿ ಸ್ವೀಕರಿಸಿದ ಹೃದಯಂಗಮವಾಗಿತ್ತು ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್‌ರವರಿಗೆ ಜಿಲ್ಲೆಗಳು, ರಾಜ್ಯಗಳು ಎಂಬ ಭೇದ ಭಾವವಿಲ್ಲ. ಈ ನಿಟ್ಟಿನಲ್ಲಿ ಅಂದರೆ ಭೀಮಾನದಿ ತಟದಲ್ಲಿ ಇರುವ ಶೋಲಾಪುರ ಮಹಾರಾಷ್ಟ್ರಕ್ಕೆ ಸೇರಿದ ಕುಗ್ರಾಮಗಳಿಗೂ ಏಕಪ್ರಕಾರವಾಗಿ ಸಹಾಯಹಸ್ತವನ್ನು ಚಾಚಿರುವ ಸುಧಾಮೂರ್ತಿರವರು ಹಾಗೂ ಸ್ವಾಮಿ ಜಪಾನಂದಜೀ ರವರ ಸೇವಾ ತತ್ಪರತೆಯನ್ನು ಮಹಾರಾಷ್ಟ್ರದ ಜನತೆ ಕೊಂಡಾಡಿದ್ದಾರೆ.
ಗುಲ್ಬರ್ಗಾ ಜಿಲ್ಲೆಯ ಹಳ್ಳಿಗಳಾದ ಕಟ್ಟೇ ಸಂಗಾವಿ, ಕಟ್ಟೇ ಸಂಗಾವಿ ಭೀಮಾ ಬ್ರಿಡ್ಜ್, ರೆಡ್ಡವಾಂಡಗಿ, ಚಿಂಚೋಳಿ, ಅಫ್ಜಲಪುರ, ಹಿಪ್ಪರಗಿ, ಕೋಡಿದುರ್ಗ, ಸಿರ್ಗಾಪುರ, ಕುರ್‍ಕೋಟ, ಮಂದರವಾಲ ಅಲ್ಲದೆ ಮಹಾರಾಷ್ಟ್ರ ರಾಜ್ಯದ ಶೋಲಾಪುರ ಜಿಲ್ಲೆಯ ಹಳ್ಳಿಗಳಾದ ಕುಸೂರು, ಸೀನ ತೆಲ್ಗಾವ್, ಅಕೋಲ, ಸಿದ್ದಾಪುರ, ಮಂಗೂಲಿ ಹಾಗೂ ನಾಡೂರ್ ಗ್ರಾಮಗಳಲ್ಲಿ ಪ್ರವಾಹ ಪರಿಹಾರ ಸಾಮಗ್ರಿಗಳನ್ನು ಕಳೆದ ನಾಲ್ಕು ದಿವಸಗಳಿಂದ ವಿತರಿಸಲಾಗಿದೆ.
ಪರಿಹಾರ ಕಾರ್ಯ ಯೋಜನೆಯ ಕೊನೆಯ ಹಂತವಾಗಿ ನ. ೫ ರಿಂದ ನ. ೮ ರವರೆಗೆ ರಾಯಚೂರು ಮತ್ತು ಹುಕ್ಕೇರಿ ಪ್ರದೇಶಗಳಲ್ಲಿ ಪರಿಹಾರ ಕೈಗೊಳ್ಳಲಾಗುತ್ತಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.