ನೆರೆ ದೇಶಗಳ ಜತೆ ಉತ್ತಮ ಸಂಬಂಧ ಸಹಜ

ಪ್ಯೊಗ್ಯೊಂಗ್ (ಉತ್ತರ ಕೊರಿಯಾ), ಸೆ.೨೫- ನೆರೆಹೊರೆಯ ದೇಶಗಳು ನಿಕಟ ಸಂಬಂಧವನ್ನು ಇಟ್ಟುಕೊಳ್ಳುವುದು ನೈಸರ್ಗಿಕ ಮತ್ತು ಸಾಮಾನ್ಯ ಸಂಗತಿಯಾಗಿದೆ ಎಂದು ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜಾಂಗ್ ಉನ್ ತಿಳಿಸಿದ್ದು, ಈ ಮೂಲಕ ದಕ್ಷಿಣ ಕೊರಿಯಾಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.
ವಾರದ ಹಿಂದೆ ರಷ್ಯಾಗೆ ತೆರಳಿ, ವ್ಲಾದಿಮಿರ್ ಪುಟಿನ್ ಜೊತೆ ಉನ್ನತ ಮಟ್ಟದ ಮಾತುಕತೆ ನಡೆಸಿದ್ದ ಕಿಮ್ ಜಾಂಗ್ ಉನ್ ವಿರುದ್ಧ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಸದ್ಯ ಯೆಲ್ ಟೀಕೆಗೆ ಕಿಮ್ ಜಾಂಗ್ ತಿರುಗೇಟು ನೀಡಿದ್ದಾರೆ. ನೆರೆಹೊರೆಯ ದೇಶಗಳ ಉತ್ತಮ ಸಂಬಂಧ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಇಂಥ ಸಂಗತಿಯನ್ನು ಗಣನೆಗೆ ತೆಗೆದುಕೊಳ್ಳಲು ಯಾವುದೇ ಸೂಕ್ತ ಕಾರಣಗಳಿಲ್ಲ. ದಕ್ಷಿಣ ಕೊರಿಯಾವು ಅಮೆರಿಕಾದ ವಕ್ತಾರನಂತೆ ಕೆಲಸ ಮಾಡುತ್ತಿದೆ ಎಂದು ಕಿಮ್ ಜಾಂಗ್ ಉನ್ ಹೇಳಿಕೆಯನ್ನು ಕೆಸಿಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಳೆದ ವಾರವಷ್ಟೇ ಬುಲೆಟ್‌ಪ್ರೂಫ್ ರೈಲಿನ ಮೂಲಕ ರಷ್ಯಾಗೆ ತೆರಳಿದ್ದ ಕಿಮ್ ಜಾಂಗ್, ಅಲ್ಲಿ ಪುಟಿನ್ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಅಲ್ಲದೆ ಯುದ್ದ ವಿಮಾನಗಳ ಕೇಂದ್ರಕ್ಕೂ ಭೇಟಿ ನೀಡಿದ್ದರು. ಮೂಲಗಳ ಪ್ರಕಾರ ರಷ್ಯಾ ಹಾಗೂ ಉತ್ತರ ಕೊರಿಯಾ ನಡುವೆ ಮಿಲಿಟರಿ ಒಪ್ಪಂದ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸಹಜವಾಗಿಯೇ ದಕ್ಷಿಣ ಕೊರಿಯಾ, ಜಪಾನ್, ಅಮೆರಿಕಾ ಮುಂತಾದ ದೇಶಗಳ ಆಕ್ರೋಶಕ್ಕೆ ಗುರಿಯಾಗಿದೆ.