ನೆರವು ವಿತರಣಾ ಕೇಂದ್ರಕ್ಕೆ ನುಗ್ಗಿದ ಗಾಜಾ ನಿವಾಸಿಗಳು

ಗಾಜಾ, ಅ.೩೦- ಒಂದೆಡೆ ಇಸ್ರೇಲ್ ಸೇನಾಪಡೆ ಗಾಜಾ ಪಟ್ಟಿಯ ಮೇಲೆ ಭೀಕರ ರೀತಿಯಲ್ಲಿ ದಾಳಿ ನಡೆಸುತ್ತಿದ್ದರೆ ಮತ್ತೊಂದೆಡೆ ಅಲ್ಲಿ ಮಾನವೀಯ ಬಿಕ್ಕಟ್ಟು ಎದುರಾಗಿದೆ. ಈ ನಡುವೆ ಗಾಜಾದಲ್ಲಿರುವ ‘ವಿಶ್ವಸಂಸ್ಥೆಯ ಫೆಲೆಸ್ತೀನೀಯನ್ ನಿರಾಶ್ರಿತರ ಏಜೆನ್ಸಿ (ಯುಎನ್‌ಆರ್‌ಡಡಬ್ಲ್ಯುಎ)ಯ ಗೋದಾಮು ಮತ್ತು ವಿತರಣಾ ಕೇಂದ್ರಕ್ಕೆ ನುಗ್ಗಿದ ಸಾವಿರಾರು ಸಂತ್ರಸ್ತ ಗಾಜಾ ನಿವಾಸಿಗಳು ಅಲ್ಲಿಂದ ದೈನಂದಿನ ಅಗತ್ಯದ ವಸ್ತುಗಳನ್ನು ಹೊತ್ತೊಯ್ದ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಗಾಜಾದಲ್ಲಿ ನಾಗರಿಕ-ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಹಿಟ್ಟು ಮತ್ತು ಸಾಬೂನಿನಂತಹ ಮೂಲಭೂತ ವಸ್ತುಗಳನ್ನು ಹೊಂದಿರುವ ಗೋದಾಮುಗಳನ್ನು ದೋಚಲಾಗಿದೆ ಎಂದು ಪ್ಯಾಲೆಸ್ಟೀನಿಯನ್ನರ ಯುಎನ್ ಪರಿಹಾರ ಸಂಸ್ಥೆ (ಯುಎನ್‌ಆರ್‌ಡಡಬ್ಲ್ಯುಎ) ಹೇಳಿದೆ. ಗಾಜಾದ ಮಧ್ಯ ಮತ್ತು ದಕ್ಷಿಣದಲ್ಲಿ ಸೇರಿದಂತೆ ಇತರ ಹಲವಾರು ಶೇಖರಣಾ ಸೌಲಭ್ಯಗಳಿಗೆ ನುಗ್ಗಿದ ನಾಗರಿಕರು ಹಿಟ್ಟು, ಗೋಧಿ ಮತ್ತು ನೈರ್ಮಲ್ಯ ಕಿಟ್‌ಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಕೆಲ ವಾರಗಳ ಹಿಂದೆ ಹಮಾಸ್‌ನ ದಾಳಿಗೆ ಪ್ರತಿಯಾಗಿ ಇಸ್ರೇಲ್ ಗಾಜಾದ ಮೇಲೆ ಬಾಂಬ್ ದಾಳಿ ಆರಂಭಿಸಿದಂದಿನಿಂದ ಗಾಜಾಕ್ಕೆ ನೆರವು ಪೂರೈಕೆಗೆ ತೊಡಕಾಗಿದ್ದು ವಿಶ್ವಸಂಸ್ಥೆಯ ನೆರವು ಏಜೆನ್ಸಿಗಳು ಗಾಝಾದ ದೆಯರ್ ಅಲ್-ಬಲಾಹ್‌ನಲ್ಲಿರುವ ತನ್ನ ಗೋದಾಮುಗಳಿಗೆ ಈಜಿಪ್ಟ್ ಮೂಲಕ ಮಾನವೀಯ ನೆರವನ್ನು ಪೂರೈಸುತ್ತಿವೆ. ಇದೇ ಗೋದಾಮಿನಿಂದ ಅಗತ್ಯ ವಸ್ತುಗಳನ್ನು ದೋಚಲಾಗಿದೆ. ನೇರವಾಗಿ ನೆರವು ವಿತರಣೆ ಮೊಟಕುಗೊಂಡಿದೆ ಮತ್ತು ಈಜಿಪ್ಟ್ ಮೂಲಕ ಟ್ರಕ್ ಗಳಲ್ಲಿ ಪೂರೈಕೆಯಾಗುತ್ತಿರುವ ಅಂತಅರಾಷ್ಟ್ರೀಯ ನೆರವು ಸಾಕಾಗುತ್ತಿಲ್ಲ. ಸಂಘರ್ಷ ಆರಂಭಕ್ಕೂ ಮುನ್ನ ಅಗತ್ಯ ವಸ್ತುಗಳನ್ನು ಹೊತ್ತ ಸುಮಾರು ೫೦೦ ಟ್ರಕ್ ಗಳು ಪ್ರತಿ ದಿನ ಈಜಿಪ್ಟ್ ಮೂಲಕ ಗಾಜಾ ತಲುಪುತ್ತಿದ್ದರೆ ಕಳೆದ ೩ ವಾರದಿಂದ ಕೇವಲ ೫೪ ಟ್ರಕ್ ಗಳಲ್ಲಿ ಆಹಾರ ಪೂರೈಕೆಯಾಗಿದೆ. ಗಾಜಾಕ್ಕೆ ಇನ್ನಷ್ಟು ಮಾನವೀಯ ನೆರವು ಒದಗಿಸುವ ಪ್ರಯತ್ನ ವಿಫಲವಾಗಿದೆ. ಜೀವನಾವಶ್ಯಕ ವಸ್ತುಗಳಿಗೆ ಸಮುದಾಯದಿಂದ ಅಗಾಧ ಬೇಡಿಕೆ ಇದ್ದರೆ ನಮ್ಮಲ್ಲಿರುವ ನೆರವಿನ ಸಾಮಾಗ್ರಿಗಳು ಅತ್ಯಲ್ಪವಾಗಿವೆ. ಇಸ್ರೇಲ್‌ನ ವಾಯುದಾಳಿಯಿಂದಾಗಿ ಗಾಜಾದಲ್ಲಿನ ತನ್ನ ೫೦ಕ್ಕೂ ಅಧಿಕ ಸಿಬ್ಬಂದಿ ಸಾವನ್ನಪ್ಪಿರುವುದರಿಂದ ಸೂಕ್ತ ರೀತಿಯಲ್ಲಿ ನೆರವು ವಿತರಣೆ ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆ ಏಜೆನ್ಸಿ ಹೇಳಿದೆ. ಗಾಜಾ, ಪಶ್ಚಿಮ ದಂಡೆ, ಜೋರ್ಡನ್, ಸಿರಿಯಾ ಮತ್ತು ಲೆಬನಾನ್‌ಗಳಲ್ಲಿ ಯುಎನ್‌ಆರ್‌ಡಬ್ಲ್ಯುಎ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ವಹಿಸುವ ಜತೆಗೆ ಮಾನವೀಯ ನೆರವು ವಿತರಣೆಯಲ್ಲಿ ತೊಡಗಿಕೊಂಡಿದೆ. ಗಾಜಾಕ್ಕೆ ಆಹಾರ, ನೀರು, ಔಷಧ ಮತ್ತು ಇಂಧನ ಪೂರೈಕೆಯನ್ನು ಇಸ್ರೇಲ್ ಸಂಪೂರ್ಣವಾಗಿ ನಿರ್ಭಂಧಿಸಿದ್ದು ಕಳೆದ ವಾರವಷ್ಟೇ ಮಾನವೀಯ ನೆರವು ವಿತರಣೆಗೆ ಅವಕಾಶ ದೊರಕಿದೆ.

ದಾಳಿ ನಿರೀಕ್ಷಿತ: ಡಬ್ಲ್ಯುಎಫ್‌ಪಿ
ಸದ್ಯ ಜನರು ಎದುರಿಸುತ್ತಿರುವ ಕಷ್ಟಕರ ಪರಿಸ್ಥಿತಿಗಳಿಂದಾಗಿ ಗೋದಾಮುಗಳ ಮೇಲಿನ ದಾಳಿಗಳು ನಿರೀಕ್ಷಿತವಾಗಿತ್ತು. ಜನರು ತುಂಬಾ ಹತಾಶರಾಗಿದ್ದು, ಹಸಿವಿನಿಂದ ಕೂಡಿದ್ದಾರೆ.
-ಅಬೀರ್ ಎಟೆಫಾ, ಯುಎನ್ ವಿಶ್ವ ಆಹಾರ
ಕಾರ್ಯಕ್ರಮದ (ಡಬ್ಲ್ಯುಎಫ್‌ಪಿ) ಹಿರಿಯ ವಕ್ತಾರೆ