ನೆರವಿಗೆ ಸಂತ್ರಸ್ತರ ಮನವಿ

ಗುಲ್ಬರ್ಗ, ಅ. ೨೬- ನೆರೆಯಿಂದ ತೊಂದರೆಗೊಳಗಾಗಿರುವ ನಮಗ್ಯಾರಿಗೂ ಸರ್ಕಾರದಿಂದ ನಯಾ ಪೈಸೆ ಪರಿಹಾರ ಬಂದಿಲ್ಲ. ಪ್ರವಾಹದಿಂದ ಮನೆ, ಬೆಳೆ ಕಳೆದುಕೊಂಡಿದ್ದರೂ ಕೇಳುವವರಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಪರಿಹಾರ ಒದಗಿಸುವಂತೆ ಜೇವರ್ಗಿ ತಾಲ್ಲೂಕಿನ ನೆರೆಪೀಡಿತ ಗ್ರಾಮಗಳ ಸಂತ್ರಸ್ತರು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಲ್ಲಿ ಅಲವತ್ತುಕೊಂಡರು.
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಇಂದು ಕಲಬುರಗಿ ಜಿಲ್ಲೆಯ ಅಫಸಲಾಪುರ ತಾಲ್ಲೂಕಿನ ಸಡರಗಿ ಗ್ರಾಮ ಮತ್ತು ಜೇವರ್ಗಿ ತಾಲ್ಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಸಿದ ಸಂದರ್ಭದಲ್ಲಿ ಹಲವು ಸಂತ್ರಸ್ತರು ಸರ್ಕಾರದಿಂದ ಪರಿಹಾರ ಸಿಗದ ಬಗ್ಗೆ ನೋವು ತೋಡಿಕೊಂಡಲು.
ಏನಾದರೂ ಮಾಡಿ ಪರಿಹಾರ ಕೊಡಿಸಿ, ಮನೆ, ಬೆಳೆ ಕಳೆದುಕೊಂಡರು ಕೇಳುವವರಿಲ್ಲ. ನಯಾಪೈಸೆ ಪರಿಹಾರ ಬಂದಿಲ್ಲ ಎಂದು ಸಂತ್ರಸ್ತರು ಹೇಳಿದರು. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ನೆರೆಯಿಂದ ಹಾನಿಗೊಳಗಾಗಿರುವ ಅತ್ತಿಬೆಳೆಯನ್ನು ವೀಕ್ಷಿಸಿ ರೈತರ ಜತೆ ಮಾತನಾಡಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಇಲ್ಲಿನ ಪರಿಸ್ಥಿತಿಯನ್ನು ಖುದ್ಧು ನೋಡಿದ್ದೇನೆ. ಮುಖ್ಯಮಂತ್ರಿಗಳ ಇಲ್ಲಿನ ಪರಿಸ್ಥಿತಿ ಬಗ್ಗೆ ಗಮನಕ್ಕೆ ತಂದು ಪರಿಹಾರ ಕೊಡಿಸುವುದಾಗಿಯೂ ಸಿದ್ಧರಾಮಯ್ಯ ಹೇಳಿದರು.
ಸಭೆ
ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳುವ ಮೊದಲು ವಿರೋಧಪಕ್ಷಧ ನಾಯಕ ಸಿದ್ಧಱಾಮಯ್ಯ ಅವರುಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕರಾದ ಶರಣಬಸಪ್ಪ ದರ್ಶನಾಪುರ, ಡಾ. ಅಜೇಯ್‌ಸಿಂಗ್, ಎಂ.ವೈ. ಪಾಟೀಲ್ ಮತ್ತು ಖನಿಜ್ ಫಾತಿಮಾ ಇವರುಗಳ ಜತೆ ಸಭೆ ನಡೆಸಿ, ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡರು.