ನೆರಡಗಂ ಮಠದಲ್ಲಿ ಲಿಂಗೈಕ್ಯ ಡಾ.ಸಂಗನಬಸವ ಶ್ರೀಗಳ ಸ್ಮರಣೆ ,ಕಾರ್ತಿಕ ದೀಪೋತ್ಸವ

ಸೈದಾಪುರ:ಡಿ.7:ಯಾವುದೇ ಜಾತಿ, ಮತ ಪಂಥಗಳ ಭಿನ್ನತೆಯಿಲ್ಲದೆ ವಿವಿಧತೆಯಲ್ಲಿ ಏಕತೆ ಸಾರುವ ಭಾರತೀಯ ನೆಲದಲ್ಲಿ ಜನಸಿದ ನಾವುಗಳೇ ಧನ್ಯರು ಎಂದು ಖ್ಯಾತ ಪ್ರವಚನಕಾರರು ಹಾಗೂ ಜಮಖಂಡಿಯ ಬಸವ ಜ್ಞಾನ ಗುರುಕುಲದ ಶರಣ ಶ್ರೀ ಡಾ. ಈಶ್ವರ ಮಂಟೂರ ಅವರು ಅಭಿಪ್ರಾಯಪಟ್ಟರು.
ಸಮೀಪದ ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಲಿಂಗೈಕ್ಯ ಡಾ. ಸಂಗನಬಸವ ಶ್ರೀಗಳ ಸ್ಮರಣೋತ್ಸವ ಹಾಗೂ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೀಪಕ್ಕೆ ಯಾವುದೇ ಬೇಧವಿಲ್ಲ ಅದು ನಮ್ಮ ಸಮಾಜದ ಶಾಂತಿ ಹಾಗೂ ಸಮಾನತೆಯ ಸಂಕೇತವಾಗಿದೆ ಎಂದರು. ಲಿಂಗೈಕ್ಯ ಡಾ. ಸಂಗನಬಸವ ಮಹಾಸ್ವಾಮಿಗಳು, ಪ್ರತಿಷ್ಠಿತ ಹಾಲಕೆರೆ ಶ್ರೀಮಠ, ಶಿವಯೋಗಿ ಮಂದಿರ ಸೇರಿದಂತೆ ನಾಡಿನ ನೂರಾರು ಮಠಗಳನ್ನು ಮುನ್ನಡೆಸುತ್ತಿದ್ದ ಅವರು ತಾವು ಓದಿಸಿ ಬೆಳೆಸಿ ತಮ್ಮ ಶ್ರೀಮಠಕ್ಕಾಗಿ ಇಟ್ಟುಕೊಂಡಿದ್ದ ಪುತ್ರ ಈ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳನ್ನು ನೆರಡಗಂ ಭಕ್ತರ ಒತ್ತಾಯಕ್ಕೆ ಮಣಿದು ಪಶ್ಚಿಮಾದ್ರಿ ಸಂಸ್ಥಾನಕ್ಕೆ ಪೀಠಾಧಿಪತಿಯಾಗಿ ಕಳುಹಿಸಿದ್ದರು ಎಂದು ನೆನಪಿಸಿದರು. ಕಾಯಕಯೋಗಿ ಶ್ರೀಗಳು ದೈಹಿಕವಾಗಿ ನಮ್ಮಿಂದ ದೂರ ಆದರೂ ಅವರ ಆಚಾರ-ವಿಚಾರ ಹಾಗೂ ಮಾರ್ಗದರ್ಶನ ಎಂದೆಂದಿಗೂ ಶಾಸ್ವತವಾಗಿ ಉಳಿಯಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀಮಠದ ಪೀಠಾಧ್ಯಕ್ಷರಾದ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಶಾಂತವೀರ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಖಾಸಾ ಮಠ ಗುರುಮಠಕಲ್, ಶಂಭುಲಿಂಗ ಸ್ವಾಮಿಗಳು ಕಲ್ಲೂರು, ಆದಿತ್ಯಪರಾಶ್ರೀ ಸ್ವಾಮಿಗಳು ಬಿಜ್ವಾರ, ಲಿಂಗಪ್ಪ ತಾತಾ ಗುರ್ಲಾಪಲ್ಲಿ, ಮಖ್ತಲ್ ಶಾಸಕ ಚಿಟ್ಟೆಂ ರಾಮಮೋಹನರೆಡ್ಡಿ, ಚಿಂತಕರಾದ ಅಪ್ಪಲ್ ಪ್ರಸಾದ, ಬಿ.ಕೊಂಡಯ್ಯ, ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ ಶಿವರಾಜ ಪಾಟೀಲ್ ಕೃಷ್ಣಾ, ಅಶೋಕಗೌಡ, ವಿದ್ಯಾಸಾಗರ, ಯಲ್ಲಾರೆಡ್ಡಿ, ಮಹಿಪಾಲರೆಡ್ಡಿ ಮುಂತಾದವರಿದ್ದರು. ಇದೇ ವೇಳೆ ಸ್ಥಳೀಯ ಸಿದ್ಧಲಿಂಗ ದೇವಸ್ಥಾನದ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಶರಣಕುಮಾರ ವಠಾರ ಸಂಗಡಿಗರು ಸಂಗೀತ ರಸದೌತಣವನ್ನು ಉಣ ಬಡಿಸಿದರು.
…………………….

ಗುರುವನ್ನು ನೆನೆದು ಶ್ರೀಗಳು ಭಾವುಕ..!
ಮಣ್ಣಿನ ಮುದ್ದೆಯಂತಿದ್ದ ತಮಗೆ ವಿದ್ಯೆ ಬುದ್ಧಿ ಕಲಿಸಿದ್ದು ಲಿಂಗೈಕ್ಯ ಡಾ. ಸಂಗನಬಸವ ಮಹಾಸ್ವಾಮಿಗಳು, ಆರಂಭದಲ್ಲಿ ತಮಗೆ ಹಾಲಕೇರೆ ಶ್ರೀಮಠದ ನೇತೃತ್ವವ ನೀಡುವ ತಯಾರಿಯಲ್ಲಿದ್ದ ಪೂಜ್ಯರು ನೆರಡಗಂ ಭಕ್ತರು ಕೇಳಿಕೊಂಡಾಗ ಈ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿಯಾಗಿ ನೇಮಿಸಿ ಹತ್ತೊಂಬತ್ತನೇ ವಯಸ್ಸಿಗೆ ದೊಡ್ಡ ಜವಾಬ್ದಾರಿಯನ್ನು ನೀಡಿದರು. ಅವರ ಆಶೀರ್ವಾದ, ಸಲಹೆ ಸೂಚನೆ ಹಾಗೂ ಮಾರ್ಗದರ್ಶನದ ಜತೆಗೆ ಭಕ್ತರ ಸಹಕಾರದಿಂದ ಶ್ರೀಮಠದಲ್ಲಿ ನಾನಾ ಸಾಮಾಜಿಕ ಹಾಗೂ ಆಧ್ಯಾತ್ಮೀಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದೇವೆ. ಆದರೆ ಇದೀಗ ತಮ್ಮ ಆರಾಧ್ಯ ದೈವ ಲಿಂಗೈಕ್ಯರಾಗಿದ್ದು ಭೌತಿಕವಾಗಿ ದೂರವಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನತ್ತಲೇ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಭಾವುಕರಾದರು.