ನೆಮ್ಮದಿ ಬದುಕಿಗೆ ಬಸವಾದಿ ಶರಣರ ಚಿಂತನೆಗಳು ಪೂರಕ

ಭಾಲ್ಕಿ:ಮಾ.28: ಮನುಷ್ಯನ ನೆಮ್ಮದಿ ಬದುಕಿಗೆ ಬಸವಾದಿ ಶರಣರ ಚಿಂತನೆಗಳು ಪೂರಕವಾಗಿವೆ ಎಂದು ಹಿರೇಮಠ ಸಂಸ್ಥಾನದ ಮಹಾಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದ ಲೆಕ್ಚರ್ ಕಾಲೋನಿಯ ಸೋಮನಾಥ ಹೊಸಾಳೆ ಅವರ ನಿವಾಸದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ಜಗತ್ತಿನಲ್ಲಿ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ. ಎಲ್ಲರೂ ಒತ್ತಡದಲ್ಲಿ ಜೀವನ ಸಾಗಿಸುತ್ತ ಶಾಂತಿ ಸಮಾಧಾನ ಕಳೆದು ಕೊಳ್ಳುತ್ತಿದ್ದಾರೆ. ಇದರಿಂದ ಹೊರ ಬರಲು ಮತ್ತು ಜೀವನಕ್ಕೆ ಉತ್ತಮ ಚೈತನ್ಯ ತಂದು ಕೊಡುವಲ್ಲಿ ಬಸವಾದಿ ಶರಣರ ವಿಚಾರಧಾರೆ, ವಚನಗಳು ಪ್ರಮುಖ ಪಾತ್ರ ವಹಿಸುತ್ತವೆ.
ಎಲ್ಲರೂ ಸರಳ ಜೀವನಕ್ಕೆ ಶರಣರು ಕೊಟ್ಟಿರುವ ವಚನಗಳನ್ನು ಪಠಣ ಮಾಡಿ ಅದರಂತೆ ನಡೆದು ಉತ್ತಮ ಜೀವನ ರೂಪಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಸೇರಿದಂತೆ ಹಲವರು ಇದ್ದರು. ಇದೇ ವೇಳೆ ಸೋಮನಾಥ ಹೊಸಾಳೆ ದಂಪತಿಗಳನ್ನು ಸನ್ಮಾನಿಸಲಾಯಿತು. ರಾಜಕುಮಾರ ಸಾಲಿ ಸ್ವಾಗತಿದರು. ಹಣಮಂತ ಕಾರಾಮುಂಗೆ ನಿರೂಪಿಸಿದರು.