
ಕೆಂಭಾವಿ:ಆ.3:ವೇದ ಉಪನಿಷತ್ತು, ಪುರಾಣ, ಪ್ರವಚನದ ಸಾರ, ಬಸವಾದಿ ಶಿವಶರಣರ ವಚನಗಳ ತತ್ವ ಚಿಂತನಾ, ಮಂಥನದ ಜ್ಞಾನಾಮೃತವೇ ಶಿವಾನುಭವ, ಎಂದು ಶಿಕ್ಷಕ ಶಿವರುದ್ರಪ್ಪ ಬೊಮ್ಮನಹಳ್ಳಿ ಹೇಳಿದರು.
ಪಟ್ಟಣದ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಮಂಗಳವಾರ ರಾತ್ರಿ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು ಯೋಗ ಸಾಧನೆಗೆ ದಾರಿ ದೀಪ. ಹುಟ್ಟು ಸಾವಿನ ಭವಬಂಧನ ಕಳೆದು ನೆಮ್ಮದಿಯ ಬದುಕಿಗೆ ಸುಜ್ಞಾನದ ಸಂಸ್ಕಾರ ನೀಡಿ, ಜಗದೊಡೆಯ ಜಂಗಮ ಪರಬ್ರಹ್ಮ, ಪರಶಿವನ ದರ್ಶನ ಕರುಣಿಸಿ ಕೈಹಿಡಿದು ನಡೆಸುವ ವಿವೇಕ ವೈರಾಗ್ಯ ನಿಜ ಸುಖವೇ ಸತ್ಸಂಗ ಎನ್ನುತ್ತಾ, ತಿಂಗಳಿಗೊಮ್ಮೆಯಾದರೂ ಸದ್ಗುರುವಿನ ಸನ್ನಿಧಿಯಲ್ಲಿ ಸೇರಿದರೆ ಸದ್ಗತಿ ಹೊಂದಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಷ ಬ್ರ ಚನ್ನಬಸವ ಶಿವಾಚಾರ್ಯರು ಮಠ ಮಂದಿರಗಳು ಜ್ಞಾನಾಮೃತ ಉಣಬಡಿಸಿ, ಉತ್ತಮ ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಸದ್ಭಕ್ತರು ಐಹಿಕ ಸುಖಕ್ಕೆ ಅಮೂಲ್ಯ ಸಮಯ ಹಾಳು ಮಾಡಿದೆ ಶ್ರೀಮಠದಲ್ಲಿ ಜರುಗುವ ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿ ಶಿವ ಕೃಪೆಗೆ ಪಾತ್ರರಾಗಬೇಕು ಎಂದು ಆಶಿಸಿದರು.
ಖ್ಯಾತ ಕಲಾವಿದರಾದ ಶರಣಕುಮಾರ ಯಾಳಗಿ ಹಾಗೂ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು.
ಇದೇ ಸಂದರ್ಭದಲ್ಲಿ ಸಾಹಿತಿ ನಿಂಗನಗೌಡ ದೇಸಾಯಿ, ರಾಚಯ್ಯಸ್ವಾಮಿ ಮುದನೂರು, ನಿಜಗುಣಿ ವಿಶ್ವಕರ್ಮ, ಅಭಿಷೇಕ ಪಾಟೀಲ, ಸೇರಿದಂತೆ ಅನೇಕ ಸದ್ಭಕ್ತರು ಭಾಗವಹಿಸಿದ್ದರು. ಡಾ ಯಂಕನಗೌಡ ಪಾಟೀಲ್ ಮಾಲಹಳ್ಳಿ ನಿರೂಪಿಸಿ ವಂದಿಸಿದರು.