ನೆಮ್ಮದಿಯ ಜೀವನಕ್ಕೆ ಧರ್ಮಾಚರಣೆ ಅಗತ್ಯ

????????????????????????????????????

ಬೀದರ್: ಜ.9:ನೆಮ್ಮದಿಯ ಜೀವನಕ್ಕೆ ಧರ್ಮದ ಅರಿವು ಹಾಗೂ ಆಚರಣೆ ಅಗತ್ಯವಾಗಿದೆ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 10ನೇ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಧರ್ಮ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯ ಜನ್ಮ ಅತ್ಯಮೂಲ್ಯ. ಜನ್ಮ ಜನ್ಮಾಂತರಗಳ ಪುಣ್ಯದ ಫಲದಿಂದ ದೊರಕುತ್ತದೆ. ಶಿವಜ್ಞಾನ ಅರಿತು ಅದನ್ನು ಪಾವನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸುವ ವೀರಶೈವ ಧರ್ಮ ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿದೆ. ಜಗದ್ಗುರು ರೇಣುಕಾಚಾರ್ಯರು ಧರ್ಮದ ದಶಸೂತ್ರಗಳನ್ನು ಬೋಧಿಸಿ ಭಕ್ತರನ್ನು ಉದ್ಧರಿಸಿದ್ದಾರೆ. 12ನೇ ಶತಮಾನದ ಶರಣರು ಸಹ ಅದೇ ಮಾರ್ಗದಲ್ಲಿ ಸಾಗಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದು ತಿಳಿಸಿದರು.

ಹಾವಗಿಲಿಂಗೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಹಲಬರ್ಗಾ ಮಠ ಅಭಿವೃದ್ಧಿ ಹೊಂದಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯಮಿ ಒಲಿದ್ದಿನ್ ಸಾಹೇಬ್ ಬೀರಿ(ಕೆ) ಉದ್ಘಾಟಿಸಿದರು. ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನೇತೃತ್ವ ವಹಿಸಿದ್ದರು.

ತಡೋಳಾ-ಮೆಹಕರದ ರಾಜೇಶ್ವರ ಶಿವಾಚಾರ್ಯ, ಲಾಡಗೇರಿ ಹಿರೇಮಠದ ಗಂಗಾಧರ ಶಿವಾಚಾರ್ಯ, ಕಲಬುರಗಿಯ ಉದ್ಯಮಿ ಶಿವಶರಣಪ್ಪ ಸೀರೆ, ರಮೇಶ ಪ್ರಭಾ, ರಮೇಶ ಪಾಟೀಲ, ರಾಜಕುಮಾರ ಚಲುವಾ, ರಾಜು ಕುಂಬಾರ ಮತ್ತಿತರರು ಇದ್ದರು. ರವಿ ಕುಂಬಾರ ನಿರೂಪಿಸಿದರು.


ಜಗದ್ಗುರುಗಳ ಜನ್ಮದಿನ ಆಚರಣೆ

ಮಠದಲ್ಲಿ ಜಗದ್ಗುರುಗಳ 67ನೇ ಜನ್ಮದಿನವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರಿಗೆ ಬೃಹತ್ ಹೂಮಾಲೆ ಹಾಕಿ, ಶಾಲು ಹೊದಿಸಿ, ಗೌರವಿಸಲಾಯಿತು.