ನೆಮ್ಮದಿಯೇ ನಿಜವಾದ ಸಂಪತ್ತು :  ರಂಭಾಪುರಿ ಶ್ರೀ

ಚನ್ನಗಿರಿ- ಎ. ೨೫; ಮನುಷ್ಯನ ಜೀವನ ಬಹಳಷ್ಟು ಒತ್ತಡದಿಂದ ಕೂಡಿದೆ. ಭೌತಿಕ ಬದುಕಿನಲ್ಲಿ ಎಲ್ಲ ಸಂಪನ್ಮೂಲಗಳಿದ್ದರೂ ಶಾಂತಿಯಿಲ್ಲ. ಮನಸ್ಸಿನ ನೆಮ್ಮದಿಗಿಂತ ದೊಡ್ಡದಾದ ಶ್ರೀಮಂತಿಕೆ ಈ ಜಗತ್ತಿನಲ್ಲಿ ಯಾವುದೂ ಇಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ತಾಲೂಕಿನ ಕಶೆಟ್ಟಿ ಗ್ರಾಮದಲ್ಲಿ ನೂತನ ಶಿಲಾಮಂದಿರ ಉದ್ಘಾಟನೆ ಮತ್ತು ಶ್ರೀ ಗುರು ರೇವಣಸಿದ್ಧಯ್ಯ ಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಬಹು ಜನ್ಮಗಳ ಪುಣ್ಯ ಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ. ಅರಿವು ಆದರ್ಶ ಮತ್ತು ಆಚರಣೆಗಳಿಂದ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಅರಿತು ಬಾಳಿದರೆ ಬಾಳು ಸುಖಮಯ. ಮರೆತು ಮಲಗಿದರೆ ಜೀವನ ಬಂಧನಕಾರಿ. ಭವ ಬಂಧನದಿAದ ಮುಕ್ತಗೊಳಿಸುವುದೇ ಗುರುವಿನ ಧರ್ಮವಾಗಿದೆ. ಬೆಳೆಯ ಸುರಕ್ಷತೆಗೆ ಬೇಲಿ ಇರುವಂತೆ ಆತ್ಮೋನ್ನತಿಗಾಗಿ ಧರ್ಮಾಚರಣೆಯ ಅವಶ್ಯಕತೆ ತುಂಬಾ ಇದೆ. ಮನುಷ್ಯನ ಮೇಲೆ ನಂಬಿಕೆ ಇಟ್ಟವರು ಭಯ ಪಡಬಹುದು. ಆದರೆ ದೇವರ ಮೇಲೆ ನಂಬಿಕೆ ಇಟ್ಟವರು ಭಯ ಪಡುವ ಅವಶ್ಯಕತೆಯಿಲ್ಲ. ದೇಶದಲ್ಲಿ ಪ್ರಧಾನಿ, ಸಮಾಜದಲ್ಲಿ ಗುರು, ಪರಿವಾರದಲ್ಲಿ ತಂದೆ, ಮನೆಯಲ್ಲಿ ಮಹಿಳೆ ಇವರು ಎಂದಿಗೂ ಸಾಧಾರಣ ವ್ಯಕ್ತಿಗಳಲ್ಲ. ಏಕೆಂದರೆ ಅಭಿವೃದ್ಧಿ ಮತ್ತು ವಿನಾಶ ಇವೆರಡೂ ಇವರ ಕೈಯಲ್ಲಿಯೇ ಇರುತ್ತವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಆದರ್ಶ ಬದುಕಿಗೆ ಕೊಟ್ಟ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಲಿಂ. ಶ್ರೀ ಗುರು ರೇವಣಸಿದ್ಧಯ್ಯ ಸ್ವಾಮಿಗಳ ಧರ್ಮ ನಿಷ್ಠೆ ಗುರು ಪರಂಪರೆಯಲ್ಲಿ ಇಟ್ಟ ಶ್ರದ್ಧೆ ಮರೆಯಲಾಗದು. ಅವರ ಆದರ್ಶ ಗುಣಗಳು ಬದುಕಿ ಬಾಳುವ ಜನತೆಗೆ ದಾರಿ ದೀಪ ಎಂದರು. ದುಗ್ಗಾವತಿ ಹಿರೇಮಠದ ಮಲ್ಲಿಕಾರ್ಜುನಸ್ವಾಮಿಗಳು ಮತ್ತು ವೀರಭದ್ರಸ್ವಾಮಿಗಳು ಮಾರ್ಗದರ್ಶನ ನೀಡಿದ ಸಮಾರಂಭದಲ್ಲಿ ಬಸವಾಪಟ್ಟಣ ರಾಂಪುರದ ಶಿವಕುಮಾರ ಹಾಲಸ್ವಾಮಿಗಳು ಹಾಗೂ ಕತ್ತಲಗೆರೆ ಉಮಾಪತಿ ಹಾಲಸಿದ್ಧೇಶ್ವರಸ್ವಾಮಿಗಳು ಉಪಸ್ಥಿತರಿದ್ದರು. ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಕಶೆಟ್ಟಿಹಳ್ಳಿ ಕೆ.ಎಂ.ರುದ್ರಯ್ಯ ಪ್ರಾಸ್ತಾವಿಕ ನುಡಿದರು. ಶಿಕ್ಷಕ ಹೆಚ್.ಎಂ.ಜಯದೇವಯ್ಯ ಸ್ವಾಗತಿಸಿದರು. ಕುಮಾರಿ ದೀಕ್ಷಿತ ಆರ್. ಪ್ರಾರ್ಥನೆ ಮಾಡಿದರು. ಬಸವಾಪಟ್ಟಣದ ಕುಮಾರಿ ವಿದ್ಯಾಶ್ರೀ ನಿರೂಪಿಸಿದರು.ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಸಂಭ್ರಮದಿAದ ಜರುಗಿತು. ಸಮಾರಂಭದ ನಂತರ ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.