ನೆಪ ಮಾತ್ರಕ್ಕೆ ಚೆಕ್‍ಪೋಸ್ಟ್: ಸಿಬ್ಬಂದಿಗಳಿಂದಲೇ ನಿಯಮಗಳ ಉಲ್ಲಂಘನೆ..?

ಕಲಬುರಗಿ.ಏ23:ಪ್ರತಿನಿತ್ಯ ಮಹಾರಾಷ್ಟ್ರದಿಂದ ಸಾವಿರಾರು ಜನರು ಜಿಲ್ಲೆಯ ಮೂಲಕ ಕರ್ನಾಟಕ ಪ್ರವೇಶ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಚೆಕ್ ಪೋಸ್ಟ್‍ಗಳನ್ನು ನಿರ್ಮಾಣ ಮಾಡಲಾಗಿದ್ದು, 72 ಗಂಟೆಯೊಳಗಾಗಿ ತಪಾಸಣೆ ಮಾಡಿಸಿಕೊಂಡ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಗಡಿಯೊಳಗೆ ಪ್ರವೇಶ ನೀಡಬೇಕು.
ಆದಾಗ್ಯೂ, ಸರ್ಕಾರದ ನಿಯಮಗಳನ್ನು ಚೆಕ್‍ಪೋಸ್ಟ್ ಸಿಬ್ಬಂದಿ ಪಾಲಿಸುತ್ತಿಲ್ಲ. ಜಿಲ್ಲೆಯ ಆಳಂದ್ ತಾಲ್ಲೂಕಿನ ಖಜೂರಿ, ಹಿರೋಳಿ ಚೆಕ್‍ಪೋಸ್ಟ್‍ಗಳಲ್ಲಿ ಸರಿಯಾಗಿ ತಪಾಸಣೆ ಮಾಡದೇ ಹಾಗೆಯೇ ಬಿಡಲಾಗುತ್ತಿದೆ. ಪೋಲಿಸ್, ಆರೋಗ್ಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿದೆ. ಮಾಧ್ಯಮದ ಕ್ಯಾಮೆರಾ ಕಂಡಾಗ ಮಾತ್ರ ಸಿಬ್ಬಂದಿ ತಪಾಸಣೆ ನಾಟಕವಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಮತ್ತೊಂದೆಡೆ ಕಳ್ಳ ಮಾರ್ಗದ ಮೂಲಕ ಮಹಾರಾಷ್ಟ್ರದಿಂದ ಜನರು ಪ್ರವೇಶ ಪಡೆಯುತ್ತಿದ್ದಾರೆ. ಪೋಲಿಸರ ಮುಂದೆಯೇ ಕಳ್ಳ ಮಾರ್ಗದಲ್ಲಿ ಜನರು ಹೋಗುತ್ತಿದ್ದರೂ ನೋಡಿಯೂ ನೋಡದಂತೆ ಸಿಬ್ಬಂದಿ ಸುಮ್ಮನಿರುತ್ತಿದ್ದಾರೆ. ಹೀಗಾಗಿ ಮಹಾರಾಷ್ಟ್ರದಿಂದ ಬಂದವರಿಂದಲೇ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿದೆ ಎನ್ನುವುದು ಹಲವರ ವಾದವಾಗಿದೆ.