ನೆನೆಗುದಿಗೆ ಬಿದ್ದಿದ್ದ ಮನೆ ನಿರ್ಮಾಣ ಕಾರ್ಯ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.22: ಇಲ್ಲಿನ ಶಿವಲಿಂಗ ನಗರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನೆನೆಗುದಿಗೆ ಬಿದ್ದಿದ್ದ ಮನೆಗಳ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.
ನಿನ್ನೆ ದಿನ ಸಂಜೆವಾಣಿ ಈ ಕುರಿತು ವರದಿ ಪ್ರಕಟಗೊಂಡಿತ್ತು. ಶಿವಲಿಂಗ ನಗರದಲ್ಲಿ ಮಹಮ್ಮದ್ ನೂರ್ ಅಲ್ಲಾ ಅವರ ಮನೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಕಳೆದ 3 ತಿಂಗಳ ಹಿಂದೆ ಇದ್ದ ಗುಡಿಸಲನ್ನು ಮನೆ ನಿರ್ಮಾಣಕ್ಕೆಂದು ಕಿತ್ತು ನಾವು 5ಸಾವಿರ ರೂ ಬಾಡಿಗೆ ಮನೆಯಲ್ಲಿದ್ದೆವು.
ದುಡಿದು ಉಣ್ಣುವ ನಮಗೆ ಜೀವನ ಸಾಗಿಸಲು ಬಾಡಿಗೆ ಕಟ್ಟುವುದು ಕಷ್ಟವಾಗುತ್ತಿದೆ. ಸರ್ಕಾರ ತ್ವರಿತಗತಿಯಲ್ಲಿ ಮನೆ ಕಾಮಗಾರಿ ಮುಗಿಸಿಕೊಡಬೇಕೆಂದು ಮಹಮ್ಮದ್ ನೂರು ಅಲ್ಲಾ ಅವರು ಸಂಜೆವಾಣಿ ಕಛೇರಿಗೆ ಬಂದು ತಿಳಿಸಿದ್ದಾರೆ.
ಮನೆ ನಿರ್ಮಿಸಿಕೊಡಲು 1 ಲಕ್ಷದ 5 ಸಾವಿರ ರೂ ಡಿ.ಡಿ. ಕಟ್ಟಿತ್ತು. ಆದರೂ ಕಾಮಗಾರಿ ಆರಂಭ ಆಗಿರಲಿಲ್ಲ. ಡಿ.ಡಿ.ಕಟ್ಟಿಸಿದ ಪಾಲಿಕೆ ಸದಸ್ಯ ಕುಬೇರ ಅವರು ಮನೆ ನಿರ್ಮಾಣ ಆರಂಭವಾಗುತ್ತೆ ಎಂದು ಹೇಳುತ್ತಲೇ ಇದ್ದರು. ಆದರೆ ಆಗಲಿಲ್ಲ.
ಮನೆ ಕಾಮಗಾರಿ ವಿಳಂಬವಾಗಿದ್ದರ ಬಗ್ಗೆ ವರದಿ ಮಾಡಲಾಗಿತ್ತು. ಆದರೆ ಮಂಡಳಿಯವರು ಬಂದು ಕಾಮಗಾರಿ ಆರಂಭ ಮಾಡಿರುವುದಕ್ಕೆ ಸಂತೋಷವಾಗಿದೆ ಎಂದು ಮಹಮ್ಮದ್ ನೂರ್ ಅಲ್ಲಾ ಹೇಳಿದ್ದಾರೆ.
ನಮ್ಮ ಮನೆಯ ಕಾಮಗಾರಿಯನ್ನು ಸಹ ಸದ್ಯದಲ್ಲೇ ಆರಂಭಿಸಲಿದ್ದಾರೆಂದು ತಿಳಿಸಿದ್ದಾರೆಂದು ದಾಸರ ವೆಂಕಟರಾಜು ಹೇಳಿದ್ದಾರೆ.