ನೆನೆಗುದಿಗೆ ಬಿದ್ದಿದ್ದ ಕೆಕೆಆರ್‍ಡಿಬಿಯ 1280 ಕಾಮಗಾರಿಗಳ ಅನುಷ್ಠಾನಕ್ಕೆ ಸಿಎಂ ಸೂಚನೆ

ಕಲಬುರಗಿ,ನ.17:ತಾಂತ್ರಿಕ ಕಾರಣಗಳಿಂದ ಪ್ರಾರಂಭವಾಗದೆ ಇರುವ ಮತ್ತು ಆಡಳಿತಾತ್ಮಕ ಅನುಮೋದನೆಯಾಗುವ ಹಂತದಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರ್ದೇಶನ ನೀಡಿರುವುದಾಗಿ ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಸಿ. ರೇವೂರ್ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ತಾವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಂಡಳಿ ವ್ಯಾಪ್ತಿಯ ಕಾಮಗಾರಿಗಳಲ್ಲಿ ಆಗುವ ವಿಳಂಬತೆಯ ಕುರಿತು ಚರ್ಚಿಸಿದ ಬಳಿಕ ಈ ಸೂಚನೆ ನೀಡಿರುವುದಾಗಿ ರೇವೂರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2019-20ನೇ ಸಾಲಿನಲ್ಲಿ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆ ಅಡಿಯಲ್ಲಿ ಬೀದರ್ (112), ಕಲಬುರಗಿ (535), ಯಾದಗಿರಿ (177), ರಾಯಚೂರು (170), ಕೊಪ್ಪಳ (255) ಹಾಗೂ ಬಳ್ಳಾರಿ (79) ಜಿಲ್ಲೆಗಳಲ್ಲಿ ಹಾಗೂ ಕಲಬುರಗಿ ವಿಭಾಗ (12)ದಲ್ಲಿ ಮಂಜೂರಾದ ಒಟ್ಟು 1280 ಕಾಮಗಾರಿಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತಂದು ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಿರುವ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.