ನೆನಪುಗಳನ್ನು ಸಂಗ್ರಹಿಸಿಡುವ ಅದ್ಭುತ ಕಲೆ ಫೋಟೋಗ್ರಫಿ

ತುಮಕೂರು, ಆ, ೧೯- ೧೯೩೯ರ ಆಗಸ್ಟ್ ೧೯ ರಂದು ಫ್ರಾನ್ಸ್ ದೇಶದಲ್ಲಿ ಮೊದಲ ಬಾರಿಗೆ ವಿಶ್ವ ಛಾಯಾಗ್ರಹಣ ದಿನವನ್ನು ಘೋಷಿಸಿತು. ಆದರೆ ಜಾಗತಿಕ ಮಟ್ಟದಲ್ಲಿ ಛಾಯಾಚಿತ್ರಕ್ಕಿರುವ ಮನ್ನಣೆ ಗಮನಿಸಿ ೨೦೧೦ರ ಆಗಸ್ಟ್ ೧೯ ರಂದು ವಿಶ್ವ ಮಟ್ಟದಲ್ಲಿ ಭಾರತವೂ ಸೇರಿದಂತೆ ಅಂದಾಜು ೧೦೦ ದೇಶಗಳು ಆನ್‌ಲೈನ್ ಗ್ಯಾಲರಿಗಳು ಮೊದಲ ಛಾಯಾಗ್ರಹಣ ದಿನವನ್ನು ಆಚರಿಸಿತು. ಮೊಟ್ಟ ಮೊದಲ ಬಾರಿಗೆ ನಡೆದ ಈ ಛಾಯಾಗ್ರಹಣ ದಿನ ನಂತರ ಇತಿಹಾಸದ ಪುಟ ಸೇರಿತು.
ಛಾಯಾಗ್ರಹಣ ಕಲೆ, ವಿಜ್ಞಾನ ಮತ್ತು ಇತಿಹಾಸವನ್ನು ಅರಿಯಲು ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್ ೧೯ ರಂದು ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶವು ಹೆಚ್ಚು ಹೆಚ್ಚು ಛಾಯಾಗ್ರಾಹಕರು, ಪರಿಣಿತರನ್ನು ಬೆಳೆಸುವುದು ಮತ್ತು ಕಲೆ ಮತ್ತು ತಂತ್ರಜ್ಞಾನದ ಉತ್ತಮ ಮಿಶ್ರಣವಾಗಿರುವ ವೃತ್ತಿಯ ವಿಚಾರ ವಿನಿಮಯ ಮಾಡಿಕೊಳ್ಳುವುದಾಗಿದೆ.
ಆಚರಣೆಯ ಮಹತ್ವ
ಛಾಯಾಗ್ರಾಹಕರು ತಮ್ಮ ಯೋಚನೆಗಳನ್ನು ಹಂಚಿಕೊಳ್ಳಲು, ಪ್ರೋತ್ಸಾಹಿಸುವ ಮೂಲಕ, ವಿಶ್ವ, ದೇಶ, ರಾಜ್ಯ ಮಟ್ಟಗಳಲ್ಲಿ ಕಲಾವಿದರ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಮುಂದಿನ ಪೀಳಿಗೆಗೆ ತಜ್ಞರ ಅನುಭವ, ತಾಂತ್ರಿಕ ಕೌಶಲ್ಯಗಳು, ಪ್ರೇರಣೆ ನೀಡುವ ಮೂಲಕ ಈ ದಿನವನ್ನು ಸಾಕಾರಗೊಳಿಸುತ್ತಾರೆ. ಇದಕ್ಕಾಗಿ ವಿಶ್ವಾದ್ಯಂತ ಅಸಂಖ್ಯಾ ಛಾಯಾಗ್ರಾಹಕರು ಈ ದಿನಕ್ಕಾಗಿ ಕಾತರದಿಂದ ಕಾಯುತ್ತಾರೆ.
ಫೋಟೋಗ್ರಫಿ ಎಂಬುದು ಗ್ರೀಕ್ ಭಾಷೆಯ ಪದ. ’ಪೋಸ್ ಎಂದರೆ ಬೆಳಕು, ’ಗ್ರಾಫಿಯಿನ್ ಎಂದರೆ ಬೆಳಕಿನಿಂದ ಬರೆದದ್ದು ಛಾಯಾಗ್ರಹಣ.
ಈ ಪದವನ್ನು ಮೊದಲ ಬಾರಿಗೆ ಆವಿಷ್ಕರಿಸಿದವರು ಸರ್ ಜಾನ್ ಹರ್ಷೆಲ್. ಜಾರ್ಜ್ ಈಸ್ಟ್‌ಮನ್, ಹಿಪೊಲೈಟ್ ಬೇಯರ್ಡ್, ಹರ್ಬರ್ಟ್ ಬೋಯರ್ ಬಕ್ರ್ಲಿ, ಫ್ರೆಡ್ರಿಕ್ ಲಾಂಮ್ ಮೊದಲಾದವರ ಶ್ರಮವೇ ಇಂದಿನ ಆಧುನಿಕ ಕ್ಯಾಮೆರಾಗಳು. ಈ ಛಾಯಾಗ್ರಹಣ ದಿನದ ಹುಟ್ಟು ಎಂದರೆ ’ಡೆಗೋರಿಯೋ’ ಮಾದರಿಯ ಕ್ಯಾಮೆರಾ ಆವಿಷ್ಕಾರಗೊಂಡ ದಿನವೇ ಆಗಿದೆ! ಲೂಯಿಸ್ ಡೆಗೋರಿಯೋ ಎಂಬ ಮಹಾನುಭಾವ ತನ್ನ ಸತತ ಪರಿಶ್ರಮದ ಫಲವಾಗಿ ’ಕ್ರೂಡ್ ಕ್ಯಾಮೆರಾ’ ಕಂಡು ಹಿಡಿದು ಚಿತ್ರಗಳನ್ನು ಸೆರೆ ಹಿಡಿಯುವ ಕನಸಿಗೆ ರೆಕ್ಕೆ ಹಚ್ಚಿದ.
೧೮೩೯ ರಂದು ಆಗಸ್ಟ್ ೧೯ ರಂದು ಫ್ರೆಂಚ್ ಸರ್ಕಾರ ಈ ಕ್ಯಾಮೆರಾ ಆವಿಷ್ಕಾರವನ್ನು ತಾನು ’ಜಗತ್ತಿಗೆ ನೀಡುತ್ತಿರುವ ಉಚಿತ ಉಡುಗೊರೆ ಎಂದು ಅಭಿಮಾನದಿಂದ ಘೋಷಿಸಿತು. ನಂತರ ೧೮೩೯ ರಲ್ಲಿಯ ವಿಲಿಯಮ್ ಫಾಕ್ಸ್ ಟಾಲ್‌ಬಾಟ್ ಎಂಬುವರು ’ಕ್ಯಾಲೋಟೈಪ್ ಕ್ಯಾಮೆರಾ ಸಂಶೋಧಿಸಿದ. ೧೮೪೧ರಲ್ಲಿ ಈ ಸಂಶೋಧನೆಯನ್ನು ಫ್ರೆಂಚ್ ಸರ್ಕಾರ ಅಧಿಕೃತವಾಗಿ ಘೋಷಿಸಿತು.
ಹೀಗಾಗಿ, ’ಡೆಗೋರಿಯೋ ಟೈಪ್ ಮತ್ತು ’ಕ್ಯಾಲೋ ಟೆಪ್ ಎರಡೂ ಛಾಯಾಗ್ರಹಣ ಪರಿಕರಗಳನ್ನು ಇಬ್ಬರು ಅತೃಪ್ತ ಅನ್ವೇಷಕರು ೧೮೩೯ರಲ್ಲಿ ಕಂಡು ಹಿಡಿದ ಸವಿ ನೆನಪಿಗಾಗಿ ಪ್ರತಿ ವರ್ಷ ಆ.೧೯ ಅನ್ನು ವಿಶ್ವ ಛಾಯಾಗ್ರಹಣ ದಿನವನ್ನಾಗಿ ಆಚರಿಸಲಾಗುತ್ತದೆ.
ಇಂದು ಫೋಟೋಗ್ರಫಿ ಎನ್ನುವುದು ಒಂದು ದೊಡ್ಡ ಉದ್ಯಮವಾಗಿದೆ. ಫೋಟೋಗ್ರಫಿ ಉದ್ಯಮವು ಈಗ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ. ಲಕ್ಷಾಂತರ ಯುವ ಜನರು ಫೋಟೋಗ್ರಫಿಯಿಂದಲೇ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂದಿನ ಯುಗದಲ್ಲಿ ಫೋಟೋಗ್ರಫಿ ಎಂದರೆ, ಅದು ಕೇವಲ ಫೋಟೋ ತೆಗೆಯುವುದು ಮಾತ್ರವಲ್ಲ, ಮದುವೆ, ಸಭೆ, ಸಮಾರಂಭಗಳಲ್ಲಿ ವಿಡಿಯೋಗಳನ್ನು ಸೆರೆ ಹಿಡಿದು ಅದನ್ನು ಸುಂದರವಾಗಿ ಕಟ್ಟಿಕೊಡುವ ಒಂದು ಕಲೆಯೂ ಆಗಿದೆ. ಇಂದು ವೆಡ್ಡಿಂಗ್ ಫೋಟೋಗ್ರಫಿ, ಸಿನಿಮಾ ಫೋಟೋಗ್ರಫಿ ಎಂಬ ಹೆಸರಿನಲ್ಲಿ ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿದೆ.
ಇಂದು ಫೋಟೋಗ್ರಫಿ ಒಂದು ಉದ್ದಿಮೆಯಾಗಿ ಮಾತ್ರವಲ್ಲದೆ, ಅದೊಂದು ವೃತ್ತಿ, ಕಲೆ, ಹವ್ಯಾಸ, ಪ್ರತಿಭೆ, ಸೂಕ್ಷ್ಮ ಸಂವೇದೆನೆ ಎಲ್ಲವೂ ಆಗಿದೆ. ಛಾಯಾಗ್ರಹಣ ಅಥವಾ ಫೋಟೋಗ್ರಫಿ ಒಂದು ಸಂದರ್ಭಗಳನ್ನು, ನೆನಪುಗಳನ್ನು ಶೇಖರಿಸಿಡುವ ಒಂದು ಕಲೆಯಾಗಿದೆ. ಈ ಹಿಂದೆ ಕ್ಯಾಮೆರಾ ಇರುವವರು ಮಾತ್ರ ಫೋಟೋವನ್ನು ಸೆರೆಹಿಡಿಯಲು ಮಾತ್ರ ಅವಕಾಶವಿತ್ತು. ಆದರೆ ಈಗ, ಸ್ಮಾರ್ಟ್ ಫೋನ್ ಕ್ರಾಂತಿಯಿಂದಾಗಿ ಎಲ್ಲರೂ ತಮ್ಮ ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಫೋಟೋಗಳನ್ನು ಸೇರೆ ಹಿಡಿಯುವ ಮೂಲಕ ಫೋಟೋಗ್ರಾಫರ್‌ಗಳಾಗಿ ಮಾರ್ಪಟ್ಟಿದ್ದಾರೆ.