ನೆದರ್‌ಲೆಂಡ್ ವಿರುದ್ಧ ಮುಗ್ಗರಿಸಿದ ಹರಿಣ ಟೂರ್ನಿಯಿಂದ ಔಟ್

ಭಾರತ ಸೆಮಿಫೈನಲ್‌ಗೆ
ಅಡಿಲೇಡ್, ನ.೬- ಜಾಗತಿಕ ಕ್ರಿಕೆಟ್‌ನಲ್ಲಿ ಹಾಸ್ಯದಾಯಕವಾಗಿ ಚೋಕರ್ಸ್‌ಗಳೆಂದು ಕರೆಯಲ್ಪಡುವ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ಅದೇ ರೀತಿಯ ಕಳಪೆ ಪ್ರದರ್ಶನ ನೀಡಿ, ಅಚ್ಚರಿ ಮೂಡಿಸಿದೆ. ವಿಶ್ವಕಪ್ ಸೆಮಿಫೈನಲ್‌ಗೇರುವ ಪ್ರಬಲ ಆಕಾಂಕ್ಷಿ ತಂಡಗಳಲ್ಲಿ ಒಂದಾಗಿದ್ದ ದ.ಆಫ್ರಿಕಾ ಇಂದು ದುರ್ಬಲ ನೆದರ್‌ಲೆಂಡ್ ವಿರುದ್ಧ ಅಚ್ಚರಿಯ ರೀತಿಯಲ್ಲಿ ಸೋತು ಟೂರ್ನಿಯಿಂದಲೇ ಹೊರಬಿದ್ದಿದೆ. ಅತ್ತ ನೆದರ್‌ಲೆಂಡ್ ಪಂದ್ಯದಲ್ಲಿ ೧೩ ರನ್‌ಗಳ ಐತಿಹಾಸಿಕ ಜಯ ಸಾಧಿಸಿದೆ. ಇನ್ನು ದ.ಆಫ್ರಿಕಾ ಟೂರ್ನಿಯಿಂದ ಹೊರಬೀಳುವುದರ ಮೂಲಕ ಜಿಂಬಾಬ್ವೆ ವಿರುದ್ಧ ಪಂದ್ಯ ಆಡುವುದರ ಮೊದಲೇ ಭಾರತ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ.
ಅಂಕಪಟ್ಟಿಯಲ್ಲಿ ಅಮೋಘ ನೆಟ್ ರನ್‌ರೇಟ್ ಹೊಂದಿದ್ದ ದಕ್ಷಿಣ ಆಫ್ರಿಕಾಗೆ ಸೆಮೀಸ್ ಪ್ರವೇಶಕ್ಕೆ ನೆದರ್‌ಲೆಂಡ್ ವಿರುದ್ಧ ಕೇವಲ ಗೆಲುವು ಸಾಧಿಸಬೇಕಿತ್ತು. ಆದರೆ ಪಂದ್ಯದಲ್ಲಿ ಅನಿರೀಕ್ಷಿತ ಸೋಲಿನ ರುಚಿ ಕಾಣುವುದರೊಂದಿಗೆ ದ.ಆಫ್ರಿಕಾ ಮತ್ತೊಮ್ಮೆ ಚೋಕರ್ಸ್‌ಗಳೆಂಬ ಹಣೆಪಟ್ಟಿಯನ್ನು ಭದ್ರಪಡಿಸಿಕೊಂಡಿದೆ. ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನೆದರ್‌ಲೆಂಡ್ ನಿಗದಿತ ೨೦ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೧೫೮ ರನ್‌ಗಳ ಉತ್ತಮ ಮೊತ್ತ ಪೇರಿಸಿತು. ನೆದರ್‌ಲೆಂಡ್ ಪರ ಸ್ಟೀಫನ್ ಮೇಬರ್ಗ್ (೩೭) ಹಾಗೂ ಅಂತಿಮ ಹಂತದಲ್ಲಿ ಟಾಮ್ ಕೂಪರ್ ಹಾಗೂ ಕಾಲಿನ್ ಆಕರ್‌ಮೆನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಮೊತ್ತ ೧೫೦ರ ಗಡಿ ದಾಟಲು ಸಾಧ್ಯವಾಯಿತು. ಕೂಪರ್ ಕೇವಲ ೧೯ ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ೩೫ ರನ್ ಗಳಿಸಿದರೆ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಆಕರ್‌ಮೆನ್ ಅಜೇಯ ೪೧ ರನ್ ಗಳಿಸಿದರು. ಅಂತಿಮ ಹಂತದಲ್ಲಿ ಸ್ಕಾಟ್ ಎಡ್ವರ್ಡ್ಸ್ ಅಜೇಯ ೧೨ ರನ್ ಗಳಿಸಿದರು. ಅಫ್ರಿಕಾ ಪರ ಕೇಶವ್ ಮಹಾರಾಜ್ ಎರಡು ವಿಕೆಟ್ ಪಡೆದರು.

ಇನ್ನು ಗುರಿ ಬೆನ್ನತ್ತಿದ ಆಫ್ರಿಕಾ ದಾಂಡಿಗರು ವಿಫಲತೆ ಕಂಡರು. ಕ್ವಿಂಟನ್ ಡಿ ಕಾಕ್ (೧೩) ಹಾಗೂ ತೆಂಬಾ ಬವುಮಾ (೨೦) ದೀರ್ಘ ಇನ್ನಿಂಗ್ಸ್ ನಡೆಸುವಲ್ಲಿ ಎಡವಿದರೆ ರೈಲೆ ರೊಸ್ಸೊ ತಂಡಕ್ಕೆ ನೆರವಾದರೂ ವೇಗದ ೨೫ ರನ್ ಗಳಿಸುವ ವೇಳೆ ಔಟಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಐಡೆನ್ ಮಾಕ್ರಮ್ (೧೭) ಹಾಗೂ ಮಿಲ್ಲರ್ (೧೭) ವಿಫಲತೆ ತಂಡಕ್ಕೆ ದುಬಾರಿಯಾಯಿತು. ಹೆನ್ರಿಚ್ ಕ್ಲಾಸೆನ್ ಈ ಹಂತದಲ್ಲಿ ತಂಡಕ್ಕೆ ಹೋರಾಟದ ರೀತಿಯಲ್ಲಿ ನೆರವಾಗುವ ಲಕ್ಷಣ ಗೋಚರಿಸಿದರೂ ೨೧ ರನ್ ಗಳಿಸಿದ್ದ ವೇಳೆ ಔಟಾಗಿದ್ದು, ಪಂದ್ಯಕ್ಕೆ ತಿರುವು ನೀಡಿತು. ನಂತರದ ಅವಧಿಯಲ್ಲಿ ನೆದರ್‌ಲೆಂಡ್ ಬೌಲರ್ಸ್‌ಗಳು ಪಂದ್ಯದಲ್ಲಿ ಮೇಲುಗೈ ಸಾಧಿಸಲು ಆರಂಭಿಸಿದರು. ಅಂತಿಮವಾಗಿ ಆಫ್ರಿಕಾ ನಿಗದಿತ ೨೦ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ೧೪೫ ರನ್ ಗಳಿಸಲಷ್ಟೇ ಶಕ್ತವಾಗಿ, ಸೋಲಿಗೆ ಶರಣಾಯಿತು. ನೆದರ್‌ಲೆಂಡ್ ಪರ ಬ್ರಾಂಡೆನ್ ಗ್ಲೋವರ್ ಮೂರು ವಿಕೆಟ್ ಪಡೆದರು.
ಭಾರತ ಸೆಮೀಸ್ ಪ್ರವೇಶ
ಅತ್ತ ದ.ಆಫ್ರಿಕಾ ಅಚ್ಚರಿಯ ಸೋಲುಣ್ಣುವ ಮೂಲಕ ಭಾರತ ತಂಡ ಜಿಂಬಾಬ್ವೆ ವಿರುದ್ಧದ ಪಂದ್ಯ ಬಾಕಿ ಉಳಿದಿರುವಂತೆ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಒಂದು ವೇಳೆ ಜಿಂಬಾಬ್ವೆ ವಿರುದ್ಧ ಭಾರತ ಸೋಲುಂಡರೂ ಸೆಮೀಸ್ ಪ್ರವೇಶಿಸುವುದು ಖಚಿತವಾಗಿದೆ. ಅಲ್ಲದೆ ಬಹುತೇಕ ಔಪಚಾರಿಕ ಪಂದ್ಯವಾಗಿದ್ದ ಬಾಂಗ್ಲಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಇಲ್ಲಿ ಜಯ ಸಾಧಿಸುವ ತಂಡ ನೇರವಾಗಿ ಸೆಮೀಸ್‌ಗೆ ಅರ್ಹತೆ ಪಡೆಯಲಿದೆ. ಹಾಗಾಗಿ ಬಾಂಗ್ಲಾ ಹಾಗೂ ಪಾಕ್ ಗೆಲುವಿಗಾಗಿ ಹರಸಾಹಸ ಪಡಲಿದೆ. ಹಾಗಾಗಿ ಭಾರತ ಹಾಗೂ ಜಿಂಬಾಬ್ವೆ ಪಂದ್ಯ ಫಲಿತಾಂಶದ ದೃಷ್ಟಿಯಿಂದ ಕೊಂಚ ರೋಚಕತೆಯನ್ನು ಕಳಕೊಂಡಿದೆ ಎಂದರೆ ತಪ್ಪಾಗಲಾರದು.