ನೆತನ್ಯಾಹು ಸಹವರ್ತಿ ದೆರಿಗೆ ಸುಪ್ರೀಂ ಆಘಾತ

ಟೆಲ್ ಅವೀವ್ (ಇಸ್ರೇಲ್), ಜ.೧೯- ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಿನ್ನಡೆ ಉಂಟಾಗಿದೆ. ಇತ್ತೀಚೆಗೆ ತೆರಿಗೆ ವಂಚನೆ ಮತ್ತು ಅಮಾನತು ಶಿಕ್ಷೆಗೆ ಗುರಿಯಾಗಿರುವ ಕಾರಣ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರಮುಖ ಸಮ್ಮಿಶ್ರ ಪಾಲುದಾರ ಅರ್ಯೆ ದೆರಿ ಅವರು ಸಚಿವರಾಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್‌ನ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಕಳೆದ ತಿಂಗಳು ಬೆಂಜಮಿನ್ ನೆತನ್ಯಾಹು ಸರ್ಕಾರವು ಅಧಿಕಾರ ವಹಿಸಿಕೊಳ್ಳುವ ಮೊದಲು, ಅವರ ಒಕ್ಕೂಟದ ಸಂಸತ್ತಿನ ಸದಸ್ಯರು, ಇತ್ತೀಚೆಗೆ ಅಪರಾಧಕ್ಕೆ ಶಿಕ್ಷೆಗೊಳಗಾದ ಯಾರಾದರೂ ತಮ್ಮ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದರೆ ಸಚಿವರಾಗಿ ಸೇವೆ ಸಲ್ಲಿಸಲು ಕಾನೂನನ್ನು ಬದಲಾಯಿಸುವ ಪ್ರಸ್ತಾವಿತ ಮಸೂದೆಯನ್ನು ಅನುಮೋದಿಸಿದ್ದರು. ಹೀಗಾಗಿ ನೆತನ್ಯಾಹು ಮತ್ತು ಅವರ ಮಿತ್ರ ಆರ್ಯೆಹ್ ಡೆರಿಗೆ ಆಂತರಿಕ ಮಂತ್ರಿ ಮತ್ತು ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಲು ಅವಕಾಶ ನೀಡುವ ಸಾಧ್ಯತೆ ಇತ್ತು. ಆದರೆ ಸುಪ್ರೀಂ ಕೋರ್ಟ್‌ನ ೧೧ ನ್ಯಾಯಮೂರ್ತಿಗಳಲ್ಲಿ ೧೦ ನ್ಯಾಯಾಧೀಶರು ಅವರ ನೇಮಕಾತಿಯನ್ನು ಪ್ರಶ್ನಿಸುವ ಕಾನೂನು ಅರ್ಜಿಗಳ ಪರವಾಗಿ ತೀರ್ಪು ನೀಡಿದರು. ಇದು ನೆತನ್ಯಾಹು ಹಾಗೂ ಡೆರಿ ತೀವ್ರ ಹಿನ್ನಡೆ ತಂದಿದೆ. ಇನ್ನು ಅಲ್ಟ್ರಾ-ಆರ್ಥೊಡಾಕ್ಸ್ ಶಾಸ್ ಪಕ್ಷದ ನಾಯಕ ಆರ್ಯೆಹ್ ಡೆರಿ ಅವರ ನೇಮಕವು ಅತ್ಯಂತ ಅಸಮಂಜಸವಾಗಿದೆ ಎಂದು ನ್ಯಾಯಾಧೀಶರು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಈಗಾಗಲೇ ಈ ತೀರ್ಪಿನ ವಿರುದ್ಧ ಹಲವಾರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸರ್ಕಾರ ಹಾಗೂ ಸಂಪೂರ್ಣ ನ್ಯಾಯ ವ್ಯವಸ್ಥೆಯ ನಡುವೆ ಇದೀಗ ವಾಕ್ಸಮರ ಆರಂಭವಾಗುವ ಆತಂಕ ಎದುರಾಗಿದೆ. ಇತ್ತೀಚಿಗೆ ಸರ್ಕಾರವು ಒಂದು ಮಸೂದೆಯನ್ನು ರಚಿಸಿದ್ದು, ಒಂದು ವೇಳೆ ಇದು ಕಾನೂನಾಗಿ ಮಾರ್ಪಟ್ಟರೆ, ರಾಜಕಾರಣಿಗಳು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ನಿರಾಕರಿಸಲು ಮತ್ತು ನ್ಯಾಯಾಧೀಶರ ಆಯ್ಕೆಯ ಮೇಲೆ ಅವರ ಪ್ರಭಾವವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಇಸ್ರೇಲ್‌ನ ಪ್ರಜಾಪ್ರಭುತ್ವದ ಸ್ವರೂಪಕ್ಕೆ ಮಾರಣಾಂತಿಕ ಹೊಡೆತ ನೀಡುವುದಾಗಿ ಸುಪ್ರೀಂ ಕೋರ್ಟ್‌ನ ಅಧ್ಯಕ್ಷರು ಹೇಳಿಕೆ ನೀಡಿದ ಬಳಿಕ ಪ್ರಸ್ತಾವಿತ ಕಾನೂನು ಬದಲಾವಣೆಗಳ ವಿರುದ್ಧ ಟೆಲ್ ಅವಿವ್‌ನಲ್ಲಿ ಈಗಾಗಲೇ ಭಾರೀ ಪ್ರತಿಭಟನೆ ನಡೆದಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಪ್ರಸ್ತುತ ಲಂಚ, ವಂಚನೆ ಮತ್ತು ನಂಬಿಕೆಯ ಉಲ್ಲಂಘನೆಯ ಆರೋಪದ ಮೇಲೆ ವಿಚಾರಣೆಯಲ್ಲಿದ್ದಾರೆ. ಆದರೆ ಈ ಆರೋಪಗಳನ್ನು ಈಗಾಗಲೇ ನೆತನ್ಯಾಹು ಅವರು ನಿರಾಕರಿಸಿದ್ದಾರೆ.