ನೆಟೆ ರೋಗದಿಂದ ತೊಗರಿ ನಷ್ಟ ಪರಿಹಾರ ನೀಡುವಂತೆ ಸಿರಗಾಪೂರ ಆಗ್ರಹ

ಕಲಬುರಗಿ: ಮಾ.11:ಕಲಬುರಗಿ ಜಿಲ್ಲೆಯಲ್ಲಿ ನೆಟೆ ರೋಗದಿಂದ ಭಾರಿ ಪ್ರಮಾಣದಲ್ಲಿ ತೊಗರಿ ಬೆಳೆ ನಷ್ಟ ಉಂಟಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.ಆದರೆ ರೈತರ ಖಾತೆಗೆ ಹಣ ಜಮಾ ಮಾಡದೆ ಮೋಸ ಮಾಡಿದ್ದಾರೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಂಗಾರು ಮಳೆ ಕೈಕೊಟ್ಟು ಮುಂಗಾರು ಬೆಳೆಗಳು ರೈತರ ಕೈಗೇಟುಕದೆ ತೊಂದರೆ ಉಂಟಾಗಿದೆ.ತಡ ಮಾಡಿ ಬಂದ ಮಳೆ ಅತಿವೃಷ್ಟಿ ಸೃಷ್ಟಿಸಿತು.ಹೀಗಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತೊಗರಿ ನೆಟೆ ರೋಗದಿಂದ ಹಾಳಾಗಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರಲಿಲ್ಲ. ರೈತರು ಬಿತ್ತನೆ ಬೀಜ ಮತ್ತು ಗೊಬ್ಬರ ಸೇರಿದಂತೆ ಎಕರೆಗೆ 10 ಸಾವಿರ ಖರ್ಚು ಮಾಡಿದ್ದಾರೆ.ಖರ್ಚು ಮಾಡಿದಷ್ಟು ಹಣ ಕೈಸೇರದೆ ತೊಂದರೆ ಅನುಭವಿಸುವಂತಾಗಿದೆ.ರೈತರು ತಮ್ಮ ಜೀವನ ಸಾಗಿಸುವುದು ದುಸ್ತರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಕ್ಟರ್ ಗೆ 25 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.ನಂತರ ಹೇಕ್ಟರ್ ಗೆ ಕೇವಲ 10 ಸಾವಿರ ರೂಪಾಯಿ ಘೋಷಣೆ ಮಾಡಿ ತಿಂಗಳುಗಳು ಕಳೆದರೂ ಇನ್ನು ವರೆಗೆ ಪರಿಹಾರ ಹಣ ಬಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರೈತರು ವಿಮಾ ಕಂಪನಿಗೆ ಬೆಳೆ ವಿಮೆ ಹಣ ಕಟ್ಟಿ 8 ತಿಂಗಳು ಕಳೆದರೂ ವಿಮಾ ಕಂಪನಿಗಳು ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಿಲ್ಲ.ಇದರಿಂದ ರೈತರಿಗ ಮತ್ತಷ್ಟು ಆಕರ್ಷಕವಾಗಿ ಸಂಕಷ್ಟ ಎದುರಾಗಿದೆ.ವಿಮೆ ಹಣ ನೀಡದ ವಿಮಾ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕು. ಕೂಡಲೇ ಮುಖ್ಯಮಂತ್ರಿಗಳು ರೈತರ ಪರ ಕಾಳಜಿ ಇದ್ದರೆ ಬೆಳೆ ಪರಿಹಾರ ಹಣ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.