ನೆಟೆರೋಗ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ನೀಡಲು ಸಿಎಂಗೆ ಖಾಶೆಂಪುರ್ ಮನವಿ

ಬೀದರ್ ಜ.10: ನೆಟೆ ರೋಗದಿಂದ ತೊಗರಿ ಬೆಳೆ ಕಳೆದುಕೊಂಡಿರುವ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರವನ್ನು ಕೂಡಲೇ ನೀಡಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಮನವಿ ಮಾಡಿದರು.
ಬೀದರ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಸೋಮವಾರ ಸಂಜೆ ಬೀದರ್ ಕೋಟೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಉತ್ಸವ ವೇದಿಕೆಯಲ್ಲಿಯೇ ಮನವಿ ಪತ್ರ ಸಲ್ಲಿಸಿ, ನೆಟೆ ರೋಗದಿಂದ ಸಂಕಷ್ಟಕ್ಕೆ ಸಿಲುಕಿದ ತೊಗರಿ ಬೆಳೆಗಾರ ರೈತರ ಸಂಕಷ್ಟಕ್ಕೆ ನೆರವಾಗಿ ಎಂದು ಕೋರಿದರು.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ತೊಗರಿ ವಾಣಿಜ್ಯ ಬೆಳೆಯಾಗಿದ್ದು, ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗುತ್ತದೆ. ಈ ವರ್ಷ ನೆಟೆ ರೋಗದ ಹಾವಳಿಯಿಂದ ಬಿತ್ತನೆ ಮಾಡಲಾಗಿರುವ ತೊಗರಿ ಬೆಳೆ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ ಲಕ್ಷಾಂತರ ರೂ. ಖರ್ಚು ಮಾಡಿ ತೊಗರಿ ಬಿತ್ತನೆ ಮಾಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ವಿಷಯವನ್ನು ನಾನು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೂಡ ಪ್ರಸ್ತಾಪ ಮಾಡಿದ್ದೇನೆ. ತೊಗರಿ ಬಿತ್ತನೆ ಮಾಡಿ ಕೈಸುಟ್ಟುಕೊಟ್ಟಿರುವ ಕಲ್ಯಾಣ ಕರ್ನಾಟಕ ಭಾಗದ ರೈತರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸುವ ಅಗತ್ಯತೆ ಇದ್ದು, ದಯಾಳುಗಳಾದ ತಾವು ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರವನ್ನು ಕೂಡಲೇ ಒದಗಿಸಿಕೊಡಬೇಕು.
ಆದಷ್ಟು ಬೇಗ ನೆಟೆ ರೋಗದಿಂದ ತೊಗರಿ ಬೆಳೆ ಕಳೆದುಕೊಂಡಿರುವ ರೈತರ ಕಣ್ಣೀರೊರೆಸುವ ಕೆಲಸ ತಮ್ಮಿಂದಾಗಬೇಕು” ಎಂದು ಬರೆದಿರುವ ಮನವಿ ಪತ್ರವನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಸಲ್ಲಿಸಿ, ಮನವಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ವಿನಂತಿಸಿದರು.