ನೆಚ್ಚಿನ ಶಿಕ್ಷಕರಿಗೆ ಗ್ರಾಮಸ್ಥರಿಂದ ಆತ್ಮೀಯ ಬೀಳ್ಕೊಡುಗೆ

ಕಾಳಗಿ :ಸೆ.13: ಹಲವು ವರ್ಷಗಳಿಂದ ತಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ಯಶವಂತರಾವ ಪವಾರ್, ರಾಜು ನಾವಿ, ಸಂಧ್ಯಾ ಪೂಜಾರ ಅವರನ್ನು ತಾಲೂಕಿನ ಸುಂಠಾಣ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಟ್ಟರು.

ತಾಲೂಕಿನ ಸುಂಠಾಣ ಗ್ರಾಮದ ಶಾಲಾವರಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ 16 ವರ್ಷಗಳಿಂದ ಸೇವೆ ಸಲ್ಲಿಸಿ, ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಿದ ಶಿಕ್ಷಕರಿಗೆ ಹಬ್ಬದ ಮಾದರಿಯಲ್ಲಿ ಸನ್ಮಾನಿಸಿದರು.

ಗ್ರಾಮದ ಹಿರಿಯ ಮುಖಂಡ ಗೋಪಾಲ ಥಾವುರ ರಾಠೋಡ ಮಾತನಾಡಿ, ತಮ್ಮ ಗ್ರಾಮಕ್ಕೆ ಬಂದ ಈ ಮೂವರು ಶಿಕ್ಷಕರು ಕೇವಲ ಪಾಠ ಮಾಡುವುದು ನಮ್ಮ ಜವಾಬ್ದಾರಿ ಎಂಬ ಮನೋಭಾವನೆಯನ್ನು ತೊರೆದು ಗ್ರಾಮದ ಪ್ರತಿಯೊಬ್ಬರ ಸಹಕಾರ ಪಡೆದು ಮಾದರಿ ಶಾಲೆಯನ್ನಾಗಿ ಪರಿವರ್ತಿಸಿದರು. ಇವರಿಂದ ಕಲಿತ ನಮ್ಮ ಮಕ್ಕಳು ಉತ್ತಮ ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲ ಮಕ್ಕಳಲ್ಲಿ ಶಿಸ್ತು ರೂಢಿಸಿ, ಸುಂಠಾಣ ಶಾಲೆಗೆ ಕೀರ್ತಿ ತಂದ ಶಿಕ್ಷಕರನ್ನು ಬೇರೆಡೆ ಕಳುಹಿಸಲು ನೋವಾಗುತ್ತಿದೆ. ಆದರೆ ಸರ್ಕಾರಿ ಆದೇಶವಾಗಿರುವುದರಿಂದ ಇತರೆ ಶಾಲೆಯ ಮಕ್ಕಳಿಗೂ ಅವರ ಸೇವೆ ಲಭಿಸಲಿ, ಆದರೆ ಸರ್ಕಾರ ನಮ್ಮ ತಾಲೂಕಿನಿಂದ ಅನೇಕ ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ ಆದರೆ ಬೆರಳಣಿಕೆಯಷ್ಟು ಶಿಕ್ಷಕರು ಮಾತ್ರ ನೇಮಕವಾಗಿರುವುದು ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಡಿಸಿದ ಅವರು ಸರ್ಕಾರ ಶೀಘ್ರವೇ ಶಿಕ್ಷಕರ ಕೊರತೆ ನೀಗಿಸಿ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಗ್ರಾಪಂ ಸದಸ್ಯ ಚಂದ್ರಕಾಂತ ಪೂಜಾರಿ ಮಾತನಾಡಿ, ನಮ್ಮ ಗ್ರಾಮದ ಶಾಲೆಯ ಶಿಕ್ಷಕರು ನಮ್ಮ ಗ್ರಾಮದ ಮಕ್ಕಳಿಗೆ ಪ್ರಥಮ ಹಂತದ ಶಿಕ್ಷಣವನ್ನು ಯಶಸ್ವಿಯಾಗಿ ನೀಡಿದ್ದಾರೆ. ಗ್ರಾಮಾಂತರ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಆದರ್ಶ ಶಾಲೆಗೆ ಸೇರ್ಪಡೆಯಾಗಲು ಈ ಶಿಕ್ಷಕರ ಶ್ರಮ ಬಹಳ ಇದೆ. ಇಂಥ ಶಿಕ್ಷಕರಿಂದ ಸರ್ಕಾರಿ ಶಾಲೆಯ ಮಕ್ಕಳು ಸಹ ಹೆಚ್ಚಿನ ಅಂಕ ಪಡೆದು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ ಎಂದರು.

ಸನ್ಮಾನ ಸ್ವೀಕರಿಸಿ ಶಿಕ್ಷಕ ರಾಜು ನಾವಿ ಮಾತನಾಡಿ, ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿಗಳಿಗಿಂತ ಗ್ರಾಮಸ್ಥರು ಮತ್ತು ಹಳೆ ವಿದ್ಯಾರ್ಥಿಗಳು ತಮ್ಮ ಸೇವೆ ಸ್ಮರಿಸಿಕೊಂಡು ಸನ್ಮಾನ ಮಾಡುತ್ತಿರುವುದು ಹೆಚ್ಚು ಖುಷಿ ತಂದಿದೆ. ಗ್ರಾಮಸ್ಥರು ನಮ್ಮ ಶಾಲೆಯ ಎಲ್ಲ ಚಟುವಟಿಕೆಗಳಿಗೆ ಸಹಕಾರ ನೀಡಿದ್ದೀರಿ. ಅದೇ ರೀತಿ ಮುಂದೆ ಬರುವ ಶಿಕ್ಷಕರಿಗೂ ಉತ್ತಮ ಸಹಕಾರ ನೀಡಿ, ನಿಮ್ಮ ಗ್ರಾಮವನ್ನು ಶೈಕ್ಷಣಿಕವಾಗಿ ಮುಂದುವರಿಸಿ ಎಂದು ಸಲಹೆ ನೀಡಿದರು.

ಚಿಂಚೋಳಿ ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ, ಶಿಕ್ಷಕ ವೀರೇಶ ಕಲ್ಮಡಿ, ಗ್ರಾಪಂ ಸದಸ್ಯ ಮಲ್ಲಪ್ಪ ಚಿಂತಕೊಟಿ, ವರ್ಗಾವಣೆಗೊಂಡ ಶಿಕ್ಷಕ ಯಶವಂತರಾವ ಪವಾರ್, ಸಂಧ್ಯಾ ಪೂಜಾರ, ಹಳೆ ವಿದ್ಯಾರ್ಥಿ ಮಹೇಶ ಪೂಜಾರಿ, ರಾಜಶೇಖರ ಬಿರೆದಾರ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಗೀತಾ ಪ್ರೇಮಕುಮಾರ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ರವಿಕುಮಾರ್ ಬಶೆಟ್ಟಿ
ಗ್ರಾಪಂ ಸದಸ್ಯ ಲಕ್ಷ್ಮೀ ಸಂತೋಷ, ಶಿಕ್ಷಕ ಗಂಗಾಧರ ಯೋಗಿ ಇತರರು ಇದ್ದರು. ಮುಖ್ಯಗುರು ಹಣಮಂತ ಮತ್ತೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ನಾಗರಾಜ ಮಡಿವಾಳ ನಿರೂಪಿಸಿ ವಂದಿಸಿದರು.

ಇದಕ್ಕೂ ಮೊದಲು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವರ್ಗಾವಣೆಗೊಂಡ ಶಿಕ್ಷಕ ಯಶವಂತರಾವ ಪವಾರ್, ರಾಜು ನಾವಿ, ಸಂಧ್ಯಾ ಪೂಜಾರ ಅವರನ್ನು ಡೊಳ್ಳು ಭಾಜ ಭಜಂತ್ರಿಗಳೊಂದಿಗೆ ಅದ್ದೂರಿ ಮೆರವಣಿಗೆ ಮಾಡಿದರು. ಮೆರವಣಿಗೆಯುದ್ದಕ್ಕೂ ಪಾಲಕರು, ಗ್ರಾಮಸ್ಥರು ಹೂ ಮಳೆ ಸುರಿಸಿ, ಸನ್ಮಾನಿಸಿ ಆತ್ಮೀಯವಾಗಿ ಗೌರವಿಸಿದರು.