ನೆಗಡಿ, ತಲೆನೋವಿಗೆ ಮನೆಮದ್ದು

೧. ಜಜ್ಜಿದ ಈರುಳ್ಳಿಯ ವಾಸನೆ ತೆಗೆದುಕೊಳ್ಳುವುದರಿಂದ ನೆಗಡಿ, ತಲೆನೋವು ಗುಣವಾಗುತ್ತದೆ.
೨. ನೆಗಡಿ ಆಗಿ ಮೂಗು ಕಟ್ಟಿರುವಾಗ ಜಜ್ಜಿದ ಈರುಳ್ಳಿಯನ್ನು ಮೂಗಿನ ಹತ್ತಿರ ಹಿಡಿದು ವಾಸನೆಯನ್ನು ಆಘ್ರಾಣಿಸಿದರೆ ಕಟ್ಟಿದ ಮೂಗು ಬಿಡುತ್ತದೆ.
೩. ಅರಿಶಿನದಪುಡಿ, ರಾಗಿಹಿಟ್ಟನ್ನು ಬೆರೆಸಿ ಕೆಂಡದ ಮೇಲೆ ಉದುರಿಸಿ ಹೊಗೆಯನ್ನು ಮೂಗಿನಿಂದ ಎಳೆದುಕೊಂಡರೆ ಮೂಗು ಕಟ್ಟಿರುವುದು ಬಿಡುತ್ತದೆ ಹಾಗೂ ತಲೆನೋವು ಕಡಿಮೆ ಆಗುತ್ತದೆ.
೪. ಒಣಶುಂಠಿಯನ್ನು ತೇಯ್ದು ಬಿಸಿಮಾಡಿ ಪಟ್ಟು ಹಾಕುವುದರಿಂದ ತಲೆನೋವು ನಿವಾರಣೆಯಾಗುತ್ತದೆ.
೫. ಏಲಕ್ಕಿಯನ್ನು ನಯವಾಗಿ ಚೂರ್ಣಿಸಿ ಬಟ್ಟೆಯಲ್ಲಿ ಶೋಧಿಸಿ ನುಣುಪಾದ ಪುಡಿಯನ್ನು ಮಾಡಿಕೊಂಡು ಅದನ್ನು ಮೂಗಿನಲ್ಲಿ ನಶ್ಯದಂತೆ ಸೇವಿಸಿ. ಹೀಗೆ ಮಾಡುವುದರಿಂದ ತಲೆನೋವು ಕಡಿಮೆ ಆಗುತ್ತದೆ.
೬. ಏಲಕ್ಕಿಯಿಂದ ತೆಗೆದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆನೋವು ಕಡಿಮೆ ಆಗುತ್ತದೆ.
೭. ಕರ್ಪೂರವನ್ನು ತುಪ್ಪದಲ್ಲಿ ತೇಯ್ದು ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.
೮. ೧ ಚಮಚ ಹಸುವಿನ ತುಪ್ಪಕ್ಕೆ ೧ ಚಮಚದಷ್ಟು ಬೆಲ್ಲದ ಪುಡಿಯನ್ನು ಬೆರೆಸಿ, ಬರೀಹೊಟ್ಟೆಯಲ್ಲಿ ೪ – ೫ ದಿನ ಸೇವಿಸುವುದರಿಂದ ನೆಗಡಿ, ತಲೆನೋವು ಗುಣವಾಗುತ್ತದೆ.
೯. ಗೋರೋಜನವನ್ನು ತುಪ್ಪದಲ್ಲಿ ಅರೆದು ಸ್ವಲ್ಪ ಬಿಸಿಮಾಡಿ ೨ – ೨ ಹನಿಯಷ್ಟು ಮೂಗಿಗೆ ಹಾಕುವುದರಿಂದ ತಲೆನೋವು ಕಡಿಮೆ ಆಗುತ್ತದೆ.
೧೦. ಒಣಶುಂಠಿಯನ್ನು ಹಾಲಿನಲ್ಲಿ ತೇಯ್ದು ಗಂಧವನ್ನು ಹಣೆಗೆ ಪಟ್ಟುಹಾಕುವುದರಿಂದ ತಲೆನೋವು ಶಮನವಾಗುತ್ತದೆ.
೧೧. ದಾಲ್ಚಿನ್ನಿ ಚಕ್ಕೆಯನ್ನು ನಿಂಬೆರಸದಲ್ಲಿ ತೇಯ್ದು ಹಣೆಗೆ ಪಟ್ಟುಹಾಕುವುದರಿಂದ ತಲೆನೋವು ಕಡಿಮೆ ಆಗುತ್ತದೆ.
೧೨. ಎರಡು ಚಮಚ ಹುರುಳಿಕಾಳು (ಸ್ವಲ್ಪ ಜಜ್ಜಿಕೊಳ್ಳಿ) ಅರ್ಧ ಚಮಚ ಬೆಟ್ಟದ ನೆಲ್ಲಿಕಾಯಿ ಚೆಟ್ಟು, ಕಾಲು ಚಮಚ ಹಿಪ್ಪಲಿ ಪುಡಿ ಇಷ್ಟನ್ನು ೧ ಲೋಟ ನೀರಿಗೆ ಹಾಕಿ ಕುದಿಸಿ ಕಷಾಯ ಮಾಡಿಕೊಂಡು ಇದನ್ನು ಜೆನುತುಪ್ಪದೊಡನೆ ಸೇವಿಸಿ ಕುಡಿದರೆ ಮೂಗಿನಲ್ಲಿ ನೀರು ಸುರಿಯುತ್ತಿದ್ದರೆ ಕಡಿಮೆ ಆಗುತ್ತದೆ. (೩ ದಿನ ೨ ಬಾರಿ).
೧೩. ಪಾರಿಜಾತ ಗಿಡದ ಎಲೆ ೫, ತುಳಸಿ ಎಲೆ ೩ – ೪ ಕುಡಿ, ೧ ತುಂಡು ಅತಿಮಧುರ, ಒಣಶುಂಠಿ ೧ ತುಂಡು ಇಷ್ಟನ್ನು ೧ ಲೋಟ ನೀರಿಗೆ ಹಾಕಿ ಕುದಿಸಿ ಕಷಾಯ ಮಾಡಿ ದಿನಕ್ಕೆ ೩ ಬಾರಿ ೩ ದಿನ ಸೇವಿಸಿ. ಎಂತಹ ನೆಗಡಿ ಇದ್ದರೂ ಕಡಿಮೆ ಆಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.