ನೃತ್ಯ ಬಯಲಾಟಗಳಿಂದ ಕಳೆಗಟ್ಟಿದ ರಂಗತೋರಣ ಶ್ರೀರಾಮ ರಂಗ ಸಂಭ್ರಮ’


ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.24: ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಯ ನಿಮಿತ್ತವಾಗಿ ದೇಶ ವಿದೇಶಗಳಲ್ಲಿ ಶ್ರೀರಾಮ ಸ್ಮರಣೆಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರತಿ ಮನೆಯಲ್ಲಿಯೂ ಶ್ರೀರಾಮ ಪೂಜೆ, ದೀಪಾರಾಧನೆ ನಡೆಯುತ್ತಿರುವಂತೆಯೇ ಬಳ್ಳಾರಿಯಲ್ಲಿ ರಂಗತೋರಣ ಸಂಸ್ಥೆಯೂ ನೃತ್ಯ, ಸಂಗೀತ-ನಾಟಕ-ಬಯಲಾಟಗಳಿಂದ ಶ್ರೀರಾಮ ರಂಗ ಸಂಭ್ರಮ ಆಚರಿಸುತ್ತಿರುವುದು ಪ್ರಸಂಶನೀಯವೆಂದು ರಾಘವ ಸ್ಮಾರಕ ಸಂಘದ ಗೌರವಾಧ್ಯಕ್ಷರೂ, ಕರ್ನಾಟಕ ನಾಟಕ ಅಕಾಡೆಮಿ ಜೀವಮಾನ ಸಾಧನೆ ಪುರಸ್ಕೃತರೂ ಆದ ಕೆ.ಚೆನ್ನಪ್ಪ ತಿಳಿಸಿದರು.
ಅವರು ರಾಘವ ಕಲಾಮಂದಿರದಲ್ಲಿ 22 ರಿಂದ 3 ದಿನಗಳ ರಂಗತೋರಣ ಶ್ರೀರಾಮ ರಂಗ ಸಂಭ್ರಮವನ್ನು ದೀಪ ಬೆಳಗಿಸಿ ಹಾಗೂ ಶ್ರೀರಾಮ ಪಟ್ಟಾಭಿಷೇಕ ಚಿತ್ರಪಟಕ್ಕೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಶ್ರೀರಾಮ ಮಂದಿರ ಪ್ರತಿಷ್ಠಾಪನಾ ಕಾರ್ಯಕ್ಕಾಗಿ ನೂರಾರು ವರ್ಷಗಳಕಾಲ ಹೋರಾಟ ನಡೆದಿದ್ದು, ನ್ಯಾಯದೇವತೆಯೂ ಧರ್ಮದೇವತೆಯಾಗಿ ತೀರ್ಪು ನೀಡಿದ್ದು ಸ್ಮರಣೀಯವೆಂದು ನಗರದ ಹಿರಿಯ ವಕೀಲರಾದ ವಿ.ಜನಾರ್ಧನ ಅಭಿಪ್ರಾಯಪಟ್ಟರು. ನಮ್ಮ ದೇಶದ ಪ್ರಧಾನ ಮಂತ್ರಿಗಳೂ ನೇಮ-ನಿತ್ಯಗಳಿಂದ ದೀಕ್ಷಾಬದ್ಧರಾಗಿ ಶ್ರೀರಾಮ ಪ್ರತಿಷ್ಠಾಪನೆ ಕೈಗೊಂಡಿದ್ದು ಎಲ್ಲರಿಗೂ ಆದರ್ಶಪ್ರಾಯವೆಂದರು.
ಹಿರಿಯ ಬಯಲಾಟ ಕಲಾವಿದರಾದ ಹನುಮಾವಧೂತರು ಇಂದು ಈ ಕಾರ್ಯಕ್ರಮ ಎಲ್ಲ ಜಾತಿ ಮತಗಳ ಬೇಧ, ರಾಜ್ಯ ರಾಷ್ಟ್ರಗಳ ಬೇಧವನ್ನೂ ಮೀರಿ ಕೂಲಿಯವರಿಂದ ಸಿನಿಮಾನಟ, ರಾಜಕಾರಣಿಗಳಲ್ಲರನ್ನೂ ಒಟ್ಟುಗೂಡಿಸಿದ್ದು ಶ್ರೀರಾಮನ ಮಹಿಮೆ ಎಂದರು.
ನಂತರ ಮಾತನಾಡಿದ ಪ್ರೊ. ಆರ್.ಭೀಮಸೇನ ಅವರು ಶ್ರೀರಾಮ ಸಕಲ ಸದ್ಗುಣಗಳ ಧಾಮ, ಅಮ್ಮನಂತೆಯೇ ಆಪ್ತ, ಅವನು ಸಕಲ ಸಹೋದರರನ್ನು ಒಟ್ಟುಗೂಡಿಸಿಕೊಂಡಂತೆ ಪ್ರತಿ ಮನೆಯೂ ಒಟ್ಟು ಕುಟುಂಬವಾಗಿ ಬಾಳಲಿ ಎಂದು ಆಶಿಸಿದರು.
ಪ್ರಾರಂಭದಲ್ಲಿ ತಾಷರಾಂಡೋಲು ವಾದನದ ನಂತರ ಭಜನಾ ಕಾರ್ಯಕ್ರಮ ನಡೆದವು. ಶ್ರೀಮತಿ ಪದ್ಮಾವತಿಯವರಿಂದ ಸಂಗೀತ ಸುಧೆ ನಡೆದು ಶ್ರೀನಿಧಿ ಆಟ್ರ್ಸ್ ಟ್ರಸ್ಟ್ ನವರಿಂದ ಮನಸೆಳೆಯುವ ನೃತ್ಯ ವೈವಿದ್ಯದ ಅಯೋಧ್ಯಾರಾಮ ನೃತ್ಯರೂಪಕ ಜನಮನ ಸೆಳೆಯಿತು. ಸಭಾ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಸ್ವಾಗತಿಸಿ ಪರಿಚಯಿಸಿದರು. ಅಡವಿಸ್ವಾಮಿ ವಂದಿಸಿದರು. ಕಾರ್ಯಕ್ರಮವನ್ನು ರವಿಕುಮಾರ ನಿರೂಪಿಸಿದರು.
ನಂತರ ಮುದ್ದಟನೂರು ಹೆಚ್.ತಿಪ್ಪೇಸ್ವಾಮಿ ಸಂಗೀತ ಮತ್ತು ನಿರ್ದೇಶನದ ರಾಮ ರಾವಣ ಯುದ್ಧ ಬಯಲಾಟವನ್ನು ಧಾತ್ರಿ ರಂಗಸಂಸ್ಥೆ, ಸಿರಿಗೇರಿ ಅವರು ಪ್ರದರ್ಶಿಸಿದರು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘವು ಪ್ರಸಾದದ ವ್ಯವಸ್ಥೆಮಾಡಿತ್ತು.