ನೃತ್ಯ ಕಲೆ ಎಂಬುದು ನಿಂತ ನೀರಲ್ಲ,ಅದು ಹರಿಯುವ ನದಿ ಇದ್ದಂತೆ: ಲತಾ ಜಹಾಗೀರದಾರ

(ಸಂಜೆವಾಣಿ ವಾರ್ತೆ)
ವಿಜಯಪುರ :ಆ.31: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಹಾಗೂ ನವರಸ ನೃತ್ಯ ಕಲಾ ಸಂಸ್ಥೆ ವಿಜಯಪುರ ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಗುರುಶಿಷ್ಯ ಪರಂಪರೆ ಪ್ರಯುಕ್ತ ದಿನಾಂಕ: 20-03-2023 ರಿಂದ 20-08-2023ರ ವರೆಗೆ ಸುಮಾರು 5 ತಿಂಗಳ ಕಾಲ ಕಥಕ್ ನೃತ್ಯ ತರಬೇತಿ ಶಿಬಿರವು ಯಶಸ್ವಿಯಾಗಿ ನವರಸ ನೃತ್ಯ ಕಲಾ ಸಂಸ್ಥೆ, ಭವನದಲ್ಲಿ ಜರುಗಿತು.
ಕಾರ್ಯಕ್ರಮದ ಸಮಾರೋಪವನ್ನು ಶ್ರೀಮತಿ ಲತಾ ಜಹಾಗೀರದಾರ ಖ್ಯಾತ ಸಂಗೀತ ಕಲಾವಿದರು, ಮಾಜಿ ಸದಸ್ಯರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು ಇವರು ನೆರವೇರಿಸಿ ಮಾತನಾಡುತ್ತ, ನೃತ್ಯ ಕಲೆ ಎಂಬುದು ನಿಂತಲ್ಲ ನೀರಲ್ಲ, ಅದು ಹರಿಯುವ ನದಿ ಇದ್ದಂತೆ ಈ ಕಲೆಯನ್ನು ಎಲ್ಲ ಶಿಬಿರಾರ್ಥಿಗಳು ಮೈಗೂಡಿಸಿಕೊಂಡು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬೇಕು. ಅದೇ ರೀತಿ ಈ ನೃತ್ಯ ಕಲೆಯಿಂದ ಆರೋಗ್ಯ, ಆಯುಷ್ಯ ಹೆಚ್ಚಾಗುತ್ತದೆ. ಸದಾ ಹಸ್ಮುಖಿಗಳಾಗಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆಧುನಿಕವಾಗಿ ಬೆಳೆಯುತ್ತಿರುವ ಪರಿಸರದಲ್ಲಿ ಇಂದಿನ ಯುವ ಜನಾಂಗ ಕಲೆ, ನೃತ್ಯದ ಕಡೆಗೆ ತಮ್ಮ ಒಲವನ್ನು ಕಡಿಮೆ ಆಗುತ್ತಿರುವದು ಕಂಡು ಬರುತ್ತಿದ್ದು, ಕೇವಲ ಮೊಬೈಲ್, ಹಾಗೂ ಆಧುನಿಕ ಉಪಕರಣಗಳ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದರಿಂದ ಆರೋಗ್ಯ, ಆಯುಷ್ಯ ಎರಡಕ್ಕು ಕುಂದು ಉಂಟಾಗುತ್ತದೆ. ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಹೋಗುದಕ್ಕಾಗಿ ಕಥಕ್ ನೃತ್ಯ ಕಲೆಯನ್ನು ಮುಂದಿನ ಪೀಳಿಗೆಗೆ ಗುರ್ತಿಸುವ ಕೆಲಸ ಆಗಬೇಕಾಗಿದೆ ಎಂದರು.
ಈ ಸಮಯದಲ್ಲಿ ಖ್ಯಾತ ಕರ್ನಾಟಕ ಸಂಗೀತ ಕಲಾವಿದರಾದ ಶ್ರೀಮತಿ ತೇಜಸ್ವಿನಿ ದೇಶಪಾಂಡೆ, ನವರಸ ನೃತ್ಯ ಕಲಾ ಸಂಸ್ಥೆಯ ನಿರ್ದೇಶಕರು ಹಾಗೂ ನೃತ್ಯ ಗುರುಗಳಾದ ರಂಗನಾಥ ಬತ್ತಾಸಿ, ನವರಸ ನೃತ್ಯ ಕಲಾ ಸಂಸ್ಥೆಯ ಉಪ ನಿರ್ದೇಶಕರಾದ ಶ್ರೀಮತಿ ಸುನಂದಾ ಬತ್ತಾಸಿ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಕಿರಣರಾಜ್ ರಾಠೋಡ್, ರವಿಕಾಂತ ಪೂಜಾರಿ, ಪೂಜಾ, ಭಾವನಾ ಕಾಂಬಳೆ, ಚೇತನ ಕಾಂಬಳೆ ಇವರು ಶಿಬಿರದಲ್ಲಿ ಪಾಲ್ಗೊಂಡ ಕಥಕ್ ನೃತ್ಯವನ್ನು ಪ್ರದರ್ಶಿಸಿ ತಮ್ಮ ಅನುಭವ ಹಾಗೂ ನೃತ್ಯ ಕಲೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.