
ಶಹಪುರ : ಅ.11:ಬದುಕಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದಲ್ಲಿ ಗೌರವವನ್ನು ತಂದು ಕೊಡಬಲ್ಲ ಮುಖ್ಯ ಕಲೆಗಳೆಲ್ಲೊಂದಾದ ನೃತ್ಯಕ್ಕೆ ಅಪಾರ ಗೌರವವಿದೆ ಎಂದು ಕಲಬುರ್ಗಿಯ ವರ್ಣಸಿಂಧು ಕಲಾ ಕೇಂದ್ರದ ನೃತ್ಯ ನಿರ್ದೇಶಕರಾದ ಅನಂತ್ ಚಿಂಚನಸೂರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇಂತಹ ಕಲೆಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡಾಗ ಜೀವನಕ್ಕೆ ಒಂದು ಅರ್ಥ ಬರುತ್ತದೆ,ಅಲ್ಲದೆ ಬದುಕಿನ ನವ ಚೈತನ್ಯವನ್ನು ನೀಡಿ ಮನಸ್ಸನ್ನು ಮುದಗೊಳಿಸಿ ಲೌಕಿಕದಿಂದ ಪರಮಾರ್ಥಿಕದತ್ತ ಜೀವನವನ್ನು ಮುನ್ನಡೆಸಬಲ್ಲ ಅಲೌಕಿಕವಾಗಿ ಕಲೆಗಳಿಂದ ಮಾನವೀಯ ಮೌಲ್ಯಗಳು ಬೆಳೆಸಲು ಸಾಧ್ಯವಾಗುತ್ತದೆ ಎಂದು ನುಡಿದರು.
ಮುಖ್ಯ ಅತಿಥಿಗಳು ಹಾಗೂ ಗೀತ ರಚನೆಕಾರರಾದ ಸೌಮ್ಯ ದೇಸಾಯಿ ಮಾತನಾಡಿ ಬದುಕು ಸಾರ್ಥಕತೆ ಗೊಳಿಸಬೇಕಾದರೆ ಕಲೆಯ ಮತ್ತು ಕಲಿಕೆಗೆ ನಮ್ಮ ಬದುಕು ತೆರೆದುಕೊಳ್ಳಬೇಕು,ಹಾಲು ಜೇನು ಬೆರೆತಂತೆ ಸಾಮಾನ್ಯ ಶಿಕ್ಷಣ ಮತ್ತು ಕಲೆ ಒಂದಾಗಿ ಪ್ರತಿಯೊಬ್ಬನ ಬದುಕನ್ನು ಹಸನುಗೊಳಿಸುತ್ತದೆ.ಕಲೆಗಳಲ್ಲೂ ಅತ್ಯಂತ ಪ್ರೌಢವಾದ ಮತ್ತು ಶ್ರೇಷ್ಠವಾದ ಕಲಿಯೇ ನೃತ್ಯ ಕಲೆ ಎಂದು ಬಣ್ಣಿಸಿದರು
ಸಮಾರಂಭದ ವೇದಿಕೆಯ ಮೇಲೆ,ಯಾದಗಿರಿಯ ಎಂ,ಜೆ, ಡ್ಯಾನ್ಸ್ ತಂಡದ ನಿರ್ದೇಶಕರಾದ ಮಧು ಕುಮಾರ್,ನ್ಯೂ ಕ್ರಿಯೇಷನ್ ಡ್ಯಾನ್ಸ್ ಅಕಾಡೆಮಿಯ ವಿಕಾಸ್ ಪವಾರ್,ಡಿ ಜೋನ್ ನೃತ್ಯ ತಂಡದ ನಿರ್ದೇಶಕರಾದ ಲಕ್ಷ್ಮಿ ಕುಂಬಾರ,ಸಮಾಜ ಸೇವಕರಾದ ರೇಣುಕಾ ಪೌಜದಾರ್,ಉಪನ್ಯಾಸಕಿ ಸವಿತಾ ಟೋಕಾಪುರ,ತೋಟಗಾರಿಕಾ ಇಲಾಖೆ ಅಧಿಕಾರಿ ಬಸ್ಸಮ್ಮ ಕಲ್ಯಾಣ್ಯಕರ್ ಹಾಗೂ ಇನ್ನಿತರರು ಉಪಸಿತರಿದ್ದರು,
ಟ್ರಸ್ಟ್ ಅಧ್ಯಕ್ಷ ಆನಂದ್ ಎಂ,ಪ್ರಾಸ್ತಾವಿಕ ನುಡಿಗಳನ್ನಾಡಿದರು,ಕುಮಾರ ಸ್ವಾತಿ ಸ್ವಾಗತಿಸಿದರು,ಸೌಮ್ಯ ನಿರೂಪಿಸಿದರು,ಅಮರೇಶ್ ವಂದಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯಾದಗಿರಿಯ ಪ್ರಾಯೋಜಿತ ತಂಡಗಳಾದ,ವಿಜಯಲಕ್ಷ್ಮಿ ಚೌಹಾಣ್ ಬಸವಕಲ್ಯಾಣ ತಂಡ ಶಾಸ್ತ್ರೀಯ ನೃತ್ಯ,ಯಲ್ಲಾಲಿಂಗ ಶಹಪುರ ಮತ್ತು ತಂಡದವರಿಂದ ಸಮೂಹ ನೃತ್ಯ,ಪ್ರಶಾಂತ್ ಬಿರಾದರ್ ಮತ್ತು ತಂಡದವರಿಂದ ಜಾನಪದ ಸಮೂಹ ನೃತ್ಯ ಜೊತೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.