ನೂರು ಬಾರಿ ಜೈಲಿಗಟ್ಟಿದರೂ ಹೋರಾಟ ನಿಲ್ಲಲ್ಲ: ಟಿ.ಎ.ನಾರಾಯಣಗೌಡ ಗುಡುಗು

ಬೀದರ:ಏ.15: ವರನಟ ಡಾ. ರಾಜಕುಮಾರ ಅವರ ನೇತೃತ್ವದಲ್ಲಿ ಗೋಕಾಕ ಚಳುವಳಿ ನಡೆದಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಾಮಫಲಕ ಚಳುವಳಿ ರಾಜ್ಯದಾದ್ಯಂತ ನಡೆದಿದೆ. ನಮ್ಮ ಹೋರಾಟದ ಫಲದಿಂದಲೇ ಇಂದು ರಾಜ್ಯದಾದ್ಯಂತ ಕಣ್ಣು ಕುಕ್ಕುವಂತೆ ಕನ್ನಡ ನಾಮಫಲಕಗಳು ರಾರಾಜಿಸುತ್ತಿವೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜರುಗಿದ ಜಿಲ್ಲಾಧ್ಯಕ್ಷರುಗಳ ಹಾಗೂ ತಾಲೂಕಾ ಅಧ್ಯಕ್ಷರುಗಳ ಸಭೆ ಹಾಗೂ ಸದಸ್ಯತ್ವ ಅಭಿಯಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡದ ನೆಲದಲ್ಲಿ ಹೋರಾಟದ ಕಿಚ್ಚಿದೆ. ನಾಡು-ನುಡಿ, ನೆಲ-ಜಲದ ವಿಷಯದಲ್ಲಿ ಕಾರ್ಯಕರ್ತರು ಗಟ್ಟಿಯಾಗಿ ನಿಲ್ಲುವ ಅವಶ್ಯಕತೆ ಇದೆ. ಬೀದರ ಗಡಿಜಿಲ್ಲೆಯಾದರೂ ಕನ್ನಡದ ಕಳಕಳಿ, ಹೃದಯ ಶ್ರೀಮಂತಿಕೆ ಇಲ್ಲಿ ಉಕ್ಕಿ ಹರಿತಿದೆ. ಡಿ. 27ರ ನಂತರ ನನಗೆ 14 ದಿನಗಳ ಜೈಲುವಾಸ ಆಯಿತು. ಈ ರಾಜ್ಯದ ಮುಖ್ಯಮಂತ್ರಿಗಳು ನಾನು ಮೂರು ತಿಂಗಳು ಹೊರಗೆ ಬರದಂತೆ ನೋಡಿಕೊಳ್ಳಿ ಎಂದಿದ್ದರು. ಮೂರು ತಿಂಗಳಲ್ಲ, ಮೂರು ವರ್ಷ ನನಗೆ ಜೈಲಿಗೆ ಹಾಕಿದರೂ ನನ್ನಲ್ಲಿರುವ ಕನ್ನಡದ ಕಿಚ್ಚು, ಛಲ ಕಡಿಮೆಯಾಗಲ್ಲ. ಇಂತಹ ನೂರು ಸಿದ್ರಾಮಯ್ಯ ಮತ್ತು ಡಿಕೆ ಶಿವಕುಮಾರ ಬಂದರೂ ನನ್ನ ರೋಮ ಅಲುಗಾಡಿಸಲು ಸಾಧ್ಯವಿಲ್ಲ ಎಂದರು. ರಾಜಕಾಣಿಗಳು ರಾಜ್ಯದ ಆಸ್ತಿ ಲೂಟಿ ಮಾಟಿ ಜೈಲಿಗೆ ಹೋದರೆ, ನಾನು ಈ ನಾಡಿನ ನೆಲ ಜಲ ಭಾಷೆಗಾಗಿ ಹೋರಾಡಿ ಜೈಲಿಗೆ ಹೋಗುತ್ತಿದ್ದೇನೆ. ಕಾರ್ಯಕರ್ತರು ನನ್ನೊಂದಿಗಿರುವಾಗ ನಾನು ಯಾವುದಕ್ಕೂ ಜಗ್ಗಲ್ಲ, ಬಗ್ಗಲ್ಲ ಎಂದು ಗುಡುಗಿದರು.
ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಬ್ಲಡ್ ಗ್ರೂಪ್ ಒಂದೇ ಇವೆ. ಹೀಗಾಗಿ ಯಾವ ಪಕ್ಷಗಳಿಗೂ ನಾನು ನಂಬಲ್ಲ. ರಾಜ್ಯಕ್ಕೆ ಒಂದು ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಶೀಘ್ರದಲ್ಲಿಯೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉದಯವಾಗಲಿದೆ. ಈಗಾಗಲೇ ಪ್ರತೀ ಜಿಲ್ಲೆಯಲ್ಲಿ ನೂರು ಸ್ವಯಂಸೇವಕರನ್ನು ರೆಡಿ ಮಾಡಲಾಗುತ್ತಿದೆ ಎಂದು ಟಿ.ಎ.ನಾರಾಯಣಗೌಡ ತಿಳಿಸಿದರು. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅಂತ್ಯಗೊಂಡಿದೆ. ಹಲ್ಲು ಕಿತ್ತ ಹಾವಿನಂತಾಗಿದೆ ಎಂದರು.
ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳಕರ್ ಮಾತನಾಡಿ ಬೀದರ ಜಿಲ್ಲೆಯಲ್ಲಿ ನಾಡು ನುಡಿಗಾಗಿ ಹಾಗೂ ಕನ್ನಡ ನಾಮಫಲಕ ಅಳವಡಿಕೆಗಾಗಿ ಹೋರಾಟ ಮಾಡಿದಾಗ ಹಲವು ತೊಂದರೆಗಳನ್ನು ನಾನು ಅನುಭವಿಸಬೇಕಾಯಿತು. ನನ್ನ ಮೇಲೆ ದೂರು ದಾಖಲಿಸಿದರೂ ನಾನು ಯಾವುದಕ್ಕೂ ಹೆದರದೆ ಬೆದರದೆ ಹೋರಾಟ ಮುಂದುವರೆಸಿದೆ. ಕೊನೆಗೆ ಪೊಲೀಸ್ ಇಲಾಖೆಯವರೇ ನನಗೆ ಬಂಧಿಸದೆ ನೀನು ಕನ್ನಡಕ್ಕಾಗಿ ಹೋರಾಟ ಮಾಡಿದ್ದಿಯಾ. ಹೋಗು ಎಂದು ಸಹಕಾರ ನೀಡಿದ್ದರು. ನನಗೆ ಟಿ.ಎ.ನಾರಾಯಣಗೌಡರೇ ಸರ್ವಸ್ವ. ಅವರೇ ನಮಗೆಲ್ಲ ಸಿಎಂ ಇದ್ದಂತೆ. ಎಲ್ಲಾ ಜಿಲ್ಲಾಧ್ಯಕ್ಷರುಗಳು ಒಂದೊಂದು ಜಿಲ್ಲೆಯ ಸಂಸದರಂತೆ ಕೆಲಸ ಮಾಡಿದಾಗ ಮಾತ್ರ ರಾಜ್ಯದಲ್ಲಿ ಕನ್ನಡವನ್ನು ಪ್ರಬಲವಾಗಿ ಉಳಿಸಿ ಬೆಳೆಸಬಹುದು. ನಾಡು ನುಡಿಯ ವಿಷಯದಲ್ಲಿ ಕಾರ್ಯಕರ್ತರು ಗಟ್ಟಿಯಾಗಿ ನಿಲ್ಲಬೇಕು. ಅಂದಾಗ ಮಾತ್ರ ರಾಜ್ಯದಲ್ಲಿ ಕನ್ನಡ ರಾರಾಜಿಸಲು ಸಾಧ್ಯವಾಗುತ್ತದೆ ಎಂದರು.
ವಿಶ್ವನಾಥ ಗೌಡÀ ಸ್ವಾಗತಿಸಿದರು. ಗೋಪಾಲ ಕುಲಕರ್ಣಿ ನಿರೂಪಿಸಿದರು. ಸೋಮಶೇಖರ ಸಜ್ಜನ್ ವಂದಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಖಾದರ ಪಾಶಾ, ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿ. ಸಣ್ಣೀರಪ್ಪ, ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನೋದ ಅಬ್ಬಿಗೆರೆ, ರಾಜ್ಯ ಪ್ರಧಾನ ಸಂಚಾಲಕ ಸಾಮಾಜಿಕ ಜಾಲತಾಣದ ಸಚಿನ ಗಾಣಿಗೇರ್, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಹನಾ ಶೇಖರ, ರಾಜ್ಯ ಗೌರವಾಧ್ಯಕ್ಷೆ ಹೇಮಲತಾ, ರಾಜ್ಯ ಮಹಿಳಾ ಘಟಕದ ಸಂಚಾಲಕಿ ಮಮತಾ ಗೌಡ, ರಾಯಚೂರು ಜಿಲ್ಲಾಧ್ಯಕ್ಷ ವಿನೋದರೆಡ್ಡಿ, ಯಾದಗಿರ ಜಿಲ್ಲಾಧ್ಯಕ್ಷ ಭೀಮು ನಾಯಕ, ರಾಜ್ಯ ಕಾರ್ಯದರ್ಶಿ ಹಣಮಂತಪ್ಪ ಅಬ್ಬಿಗೆರೆ, ಕೊಪ್ಪಳ ಜಿಲ್ಲಾಧ್ಯಕ್ಷ ಗಿರಿಶಾನಂದ, ಕಲಬುರಗಿ ಜಿಲ್ಲಾಧ್ಯಕ್ಷ ಕುಮಾರ್, ರಾಜ್ಯ ಕಾರ್ಯದರ್ಶಿ ಮಹೇಶ ಕಾಶಿ, ಔರಾದ ತಾಲೂಕಾಧ್ಯಕ್ಷ ಅನಿಲ ಹೆಡೆ, ಕಮಲನಗರ ತಾಲೂಕಾಧ್ಯಕ್ಷ ಸುಭಾಷ ಗಾಯಕವಾಡ, ಬೀದರ ತಾಲೂಕಾಧ್ಯಕ್ಷ ಸಚಿನ ಜಟಗೊಂಡ, ಹುಮನಾಬಾದ ತಾಲೂಕಾಧ್ಯಕ್ಷ ಸಚಿನ ತಿಬಶೆಟ್ಟಿ ಮುಖಂಡರುಗಳಾದ ವಿನಾಯಕರೆಡ್ಡಿ ಬುಧೇರಾ, ಪ್ರಭು ಯಾಕತಪುರ, ಶಿವರುದ್ರ ತೀರ್ಥ, ಮಲ್ಲಿಕಾರ್ಜುನ ಶಿಕೆಂಪುರೆ, ದತ್ತಾತ್ರಿ ಅಲ್ಲಂಕೆರೆ, ಉದಯಕುಮಾರ ಅಷ್ಟೂರೆ, ಮಹೇಶ ಕಾಪಸೆ, ಲಕ್ಷ್ಮಣ ಸಾತೊಳ್ಳಿ, ಗಿರಿಶ ಬಿರಾದಾರ ಸೇರಿದಂತೆ ಅನೇಕರಿದ್ದರು.