ನೂರು ಎಕ್ರೆ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವ ಯೋಜನೆಗೆ ಜೂನ್ ೫ ರಂದು ಚಾಲನೆ

ಉಜಿರೆ, ಎ.೨೫- ಬೆಳ್ತಂಗಡಿ ವಿಧಾನ ಸಭಾಕ್ಷೇತ್ರದಲ್ಲಿ ನೂರು ಎಕ್ರೆ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವ ಯೋಜನೆ ಇದೇ ಜೂನ್ ೫ ರಂದು ಪ್ರಾರಂಭಗೊಳ್ಳಲಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಅವರು ಧರ್ಮಸ್ಥಳದಲ್ಲಿ ಶನಿವಾರ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಿರ್ಧಾರ ಪ್ರಕಟಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರುಯೋಜನೆಗೆ ಚಾಲನೆ ನೀಡುವರು.

ಸಾರ್ವಜನಿಕರ ಸಹಕಾರದೊಂದಿಗೆ ಜಪಾನಿನ ಮಿಯಾವಾಕಿ ಮಾದರಿಯಲ್ಲಿ ಅರಣ್ಯ ಬೆಳೆಸುವ ಯೋಜನೆ ರೂಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು. ಮೇ ೧೫ ರೊಳಗೆ ಈ ಬಗ್ಯೆಅರಣ್ಯ ಇಲಾಖೆ ವತಿಯಿಂದ ತರಬೇತಿ ನೀಡಿ, ಜೂನ್ ೫ ರಂದು ಸಾಂಕೇತಿಕವಾಗಿ ಯೋಜನೆಗೆ ಚಾಲನೆ ನೀಡಲಾಗುವುದು. ಬೆಳ್ತಂಗಡಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಈ ಯೋಜನೆಯನ್ನು ಮುಂದಿನ ವರ್ಷಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವರು ಪ್ರಕಟಿಸಿದರು.

ಮಂಗಳೂರು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕ್ಕಳ ಅವರನ್ನು ಯೋಜನೆಗೆ ಮಾರ್ಗದರ್ಶಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸಚಿವರು ನಿರ್ದೇಶನ ನೀಡಿದರು. ಬೇಡಿಕೆಗನುಗುಣವಾಗಿ ಹಣ್ಣಿನ ಗಿಡಗಳನ್ನು ಮತ್ತು ಬೀಜಗಳನ್ನು ಪೂರೈಸುವಂತೆ ಸಲಹೆ ನೀಡಿದರು.

ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಜಾಗತಿಕ ಗ್ರಾಮದ ಕಲ್ಪನೆಯೊಂದಿಗೆ ವಿಶ್ವದ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದಾಗ, ಇಡಿ ವಿಶ್ವವೆ ನಮ್ಮ ಮನೆ ಎಂಬ ಭಾವನೆಯಿಂದ ಭೂಮಿಯನ್ನು ಚೆನ್ನಾಗಿ ರಕ್ಷಣೆ ಮಾಡಿ ಪ್ರಕೃತಿ-ಪರಿಸರವನ್ನು ಸುಸ್ಥಿತಿಯಲ್ಲಿ ಮುಂದಿನ ಜನಾಂಗಕ್ಕೆ ಬಿಟ್ಟುಕೊಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.

ಕಾಡಿನಲ್ಲಿ ಸಾಕಷ್ಟು ಆಹಾರ ಸಿಗದೆ ಕಾಡುಪ್ರಾಣಿಗಳು ನಾಡಿಗೆ ಬಂದುರೈತರ ಕೃಷಿಗೆ ಹಾನಿ ಮಾಡುತ್ತವೆ. ಇದನ್ನು ತಡೆಗಟ್ಟಲು ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಬೇಕೆಂದು ಅರಣ್ಯ ಸಚಿವರಿಗೆ ಪತ್ರ ಬರೆದಾಗತಕ್ಷಣ ಸ್ಪಂದಿಸಿದ ಅವರು ಧರ್ಮಸ್ಥಳದಲ್ಲಿ ಸಮಾಲೋಚನಾ ಸಭೆ ನಡೆಸಿರುವುದು ಸಂತೋಷವಾಗಿದೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಮಾವು, ನೇರಳೆ, ಜಂಬೂ ನೇರಳೆ, ಹಲಸು, ಹೆಬ್ಬಲಸು, ಬಿದಿರು, ನೆಲ್ಲಿ, ಪುನರ್ಪುಳಿ ಮೊದಲಾದ ಹಣ್ಣಿನ ಗಿಡಗಳನ್ನು ಕಾಡಿನಲ್ಲಿ ಬೆಳೆಸಬೇಕೆಂದು ಹೆಗ್ಗಡೆಯವರು ಸಲಹೆ ನೀಡಿದರು.

ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯರಾವ್, ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕ್ಕಳ, ಮಂಗಳೂರು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್‌ಜೆ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕಡಾ. ಎಲ್.ಎಚ್.ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಸ್, ಕೃಷಿ ವಿಭಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಪೂರಕ ಮಾಹಿತಿಯೊಂದಿಗೆ ಸಲಹೆ, ಸೂಚನೆ ನೀಡಿದರು.