ನೂರಾರು ವರ್ಷ ಇತಿಹಾಸವುಳ್ಳ ಟೆಡ್ಡಿಬೇರ್‌ಗೆ ಈ ದಿನ ಸಮರ್ಪಣೆ


ನೋಡುಗರ ಕಣ್ಣಿಗೆ ಟೆಡ್ಡಿಬೇರ್ ಕೇವಲ ಒಂದು ಗೊಂಬೆ ಅಷ್ಟೇ. ಆದರೆ ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಂತಹ, ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ ಕೊನೆಗೆ ಕಣ್ಣೀರು ಒರೆಸುವಂತಹ ಮೂಕ ಸ್ನೇಹಿತ ಎಂದು ಕರೆಯಬಹುದು. ಅಂತಹ ಸ್ನೇಹಿತನಾಗಿರುವ ಟೆಡ್ಡಿಬೇರ್ ಗಾಗಿ ಸೆ ೯ರಂದು ರಾಷ್ಟ್ರೀಯ ಟೆಡ್ಡಿ ಬೇರ್ ಡೇ ಸಮರ್ಪಿಸಲಾಗುತ್ತಿದೆ.

ಟೆಡ್ಡಿಬೇರ್ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ಪುಟ್ಟ ಮಕ್ಕಳು ಯಾವ ಮನೆಯಲ್ಲಿ ಇರುತ್ತಾರೆ ಅವರ ಮನೆಯಲ್ಲಿ ಟೆಡ್ಡಿಬೇರ್ ಇದ್ದೇ ಇರುತ್ತದೆ ಎಂದು ಯಾರು ಬೇಕಾದರೂ ಊಹಿಸಬಹುದು. ಅಷ್ಟಕ್ಕೂ ಪುಟ್ಟ ಮಕ್ಕಳ ಅತ್ಯಂತ ಪ್ರೀತಿಯ, ಮುದ್ದಾದ ಮುಗ್ದ ಸ್ನೇಹಿತ ಎಂದರೆ ಅದು ಟೆಡ್ಡಿ ಬೇರ್ ಅಲ್ಲದೆ ಬೇರೇನೂ ಇಲ್ಲ. ಟೆಡ್ಡಿಬೇರ್ ಜೊತೆ ಆಟವಾಡುತ್ತಾ ಮಕ್ಕಳು ತಮ್ಮನ್ನು ತಾವು ಮರೆತು ಬಿಡುತ್ತಾರೆ. ಕೇವಲ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಸಹ ಟೆಡ್ಡಿಬೇರ್ ಮೇಲೆ ಅಪಾರವಾದ ಪ್ರೀತಿ.

ಟೆಡ್ಡಿ ಬೇರ್ ದಿನದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು, ನಾವು 100 ವರ್ಷಗಳಿಗಿಂತಲೂ ಹಿಂದೆ ಹೋಗಬೇಕಿದೆ. ಅಂತಹ ಇತಿಹಾಸವನ್ನು ಈ ಟೆಡ್ಡಿ ಬೇರ್ ಹೊಂದಿದೆ ಎಂದರೆ ನೀವು ನಂಬಲೇ ಬೇಕು. 1902 ರಲ್ಲಿ, ಅಮೆರಿಕದ ಅಧ್ಯಕ್ಷ ಥಿಯೋಡರ್ ರೂಸ್ವೆಲ್ಟ್ ಮಿಸ್ಸಿಸ್ಸಿಪ್ಪಿಯಲ್ಲಿ ಬೇಟೆಯಾಡುವಾಗ ಕರಡಿ ಮರಿಯನ್ನು ಶೂಟ್ ಮಾಡಲು ನಿರಾಕರಿಸಿದರು. ಈ ಘಟನೆ ರಾಷ್ಟ್ರೀಯ ಸುದ್ದಿ ಮಾಡಿತು. ಕ್ಲಿಫರ್ಡ್ ಬೆರ್ರಿಮನ್ 1902 ರ ನವೆಂಬರ್ 16,ರಂದು ವಾಷಿಂಗ್ಟನ್ ಪೋಸ್ಟ್‌ನಲ್ಲಿ ಈವೆಂಟ್‌ನ ಕಾರ್ಟೂನ್ ಅನ್ನು ಪ್ರಕಟಿಸಿದರು ಮತ್ತು ಈ ವ್ಯಂಗ್ಯಚಿತ್ರವು ಎಲ್ಲೆಡೆ ಬಾರಿ ಗಮನ ಸೆಳೆಯಿತು. 1902 ರಲ್ಲಿ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾದ ಕ್ಲಿಫರ್ಡ್ ಬೆರ್ರಿಮನ್ ಅವರ ಈ ಕಾರ್ಟೂನ್ ಟೆಡ್ಡಿ ಬೇರ್‌ ಗೆ ಸ್ಫೂರ್ತಿ ನೀಡಿತು.

ಮೋರಿಸ್ ಮಿಚ್ಟೋಮ್ ಎಂಬ ನ್ಯೂಯಾರ್ಕ್ನ ಅಂಗಡಿ ಮಾಲೀಕ, ಬೆರ್ರಿಮನ್ ಅವರ ಕಾರ್ಟೂನ್ ನಿಂದ ಸ್ಫೂರ್ತಿ ಪಡೆದರು ಮತ್ತು ಅದೇ ತರಹ ಹೊಸ ಆಟಿಕೆ ರಚಿಸಲು ನಿರ್ಧರಿಸಿದರು. ನಂತರ ಅದಕ್ಕೆ ಅನುಮತಿ ಪಡೆಯಲು ಅಧ್ಯಕ್ಷರಿಗೆ ಪತ್ರವನ್ನು ಕಳುಹಿಸಿದರು, ಹೊಸ ಆಟಿಕೆ “ಟೆಡ್ಡಿ ಬೇರ್” ಎಂದು ಕರೆಯಲು ಸಾಧ್ಯವೇ ಎಂದು ರೂಸ್ವೆಲ್ಟ್ ಅವರನ್ನು ಕೇಳಿದರು. ಅಂದಿನಿಂದ,ಮಿಚ್ಟಮ್ ಮತ್ತು ಬಟ್ಲರ್ ಸಹೋದರರು ಎಂಬ ಕಂಪೆನಿಯು ಟೆಡ್ಡಿ ಬೇರ್ ಅನ್ನು ಉತ್ಪಾದಿಸಲು ಪ್ರಾರಂಭಿಸಿದರು. ಒಂದು ವರ್ಷದೊಳಗೆ ಮಿಚಿಟೋಮ್ ತನ್ನದೇ ಆದ ಕಂಪನಿಯನ್ನು ಐಡಿಯಲ್ ನಾವೆಲ್ಟಿ ಮತ್ತು ಟಾಯ್ ಕಂಪೆನಿ ಎಂದು ಪ್ರಾರಂಭಿಸಿದರು. ಇದೀಗ ಸಾಕಷ್ಟು ಪ್ರಸಿದ್ಧ ಟೆಡ್ಡಿ ಬೇರ್ ಪ್ರಪಂಚದಾದ್ಯಂತದ ಮಕ್ಕಳಿಗೆ ಇಷ್ಟವಾಯಿತು .

ಪಾಶ್ಚಿಮಾತ್ಯ ದೇಶಗಳಲ್ಲಿ ಅಲ್ಲಿನ ಜನರಿಗೆ ಯಾವುದಾದರೂ ಸಂದರ್ಭದಲ್ಲಿ ಹೆಚ್ಚು ಮನಸ್ಸಿಗೆ ಭಯ ಆದಾಗ, ಆತಂಕ ಎದುರಾದಾಗ, ಸಂಗಾತಿಯ ಜೊತೆ ಮನಸ್ತಾಪ ಬಂದಾಗ ಜನರು ಟೆಡ್ಡಿ ಬೇರ್ ಮೇಲೆ ಅವಲಂಬಿತರಾಗಿರುತ್ತಾರೆ. ನೋಡಲು ತುಂಬಾ ಕ್ಯೂಟ್ ಆಗಿ ಕಾಣುವ ಟೆಡ್ಡಿ ಬೇರ್ ದೊಡ್ಡವರ ದುಃಖ ಮತ್ತು ನೋವನ್ನು ಸಹ ಮರೆಮಾಚಿಸುವ ಶಕ್ತಿ ಪಡೆದಿದೆ. ಪ್ರತಿ ವರ್ಷ ವ್ಯಾಲೆಂಟೆನ್ಸ್ ಡೇ ಸಂದರ್ಭ ಬಂದಾಗ ಪ್ರಪಂಚದ ಎಲ್ಲಾ ಕಡೆ ಗಿಫ್ಟ್ ಸೆಂಟರ್ ಗಳಲ್ಲಿ ಹೆಚ್ಚು ಮಾರಾಟವಾಗುವ ಉಡುಗೊರೆಗಳಲ್ಲಿ ಟೆಡ್ಡಿ ಬೇರ್ ಮೊದಲ ಐದು ಸ್ಥಾನಗಳಲ್ಲಿವೆ.

ಅಂತರಾಷ್ಟ್ರೀಯ ಸುಡೋಕು ದಿನಾಚರಣೆ
ಪದಬಂಧಗಳು (ಸುಡೋಕು) ಮನೋರಂಜನೆಗಾಗಿ ರಚಿಸಲ್ಪಡುವ ಒಂದು ಬಗೆಯ ಪದ ಸಮಸ್ಯೆಗಳು. ಒಂದು ದೊಡ್ಡ ಚೌಕದಲ್ಲಿ ಅನೇಕ ಚಿಕ್ಕ ಕಪ್ಪು ಮತ್ತು ಬಿಳಿಯ ಚೌಕಗಳಿದ್ದು, ಬಿಳಿ ಚೌಕಗಳಲ್ಲಿ ಅಕ್ಷರಗಳನ್ನು ತುಂಬುವಂತೆ ಸುಳುಹುಗಳನ್ನು ನೀಡಲಾಗುತ್ತದೆ. ಇಂದು ಅಂತರಾಷ್ಟ್ರೀಯ ಸುಡೋಕು ದಿನಾಚರಣೆ ಕೂಡ ಹೌದು.

ಪತ್ರಿಕೆಗಳ ಬಹುಪಾಲು ಓದುಗರ ನೆಚ್ಚಿನ ಅಂಕಣ ಪದಬಂಧ. ಒಂದೆಡೆ ಭಾಷಾ ಪ್ರೌಢಮೆಗಳಿಸಲು ನೆರವಾಗುವ, ಮತ್ತೊಂದೆಡೆ ಮನೋವಿಕಾಸ ಮತ್ತು ಮನೋಲ್ಲಾಸಕ್ಕೆ ಪೂರಕವಾಗುವ ಪದಬಂಧಗಳ ಇತಿಹಾಸ ಇಂದು ನಿನ್ನೆಯದಲ್ಲ. ಇಂಗ್ಲೆಂಡಿನ ರಾಜನೊಬ್ಬ ಕಾಲಹರಣಕ್ಕಾಗಿ ಎಡದಿಂದ ಬಲಕ್ಕೆ ಮತ್ತು ಮೇಲಿಂದ ಕೆಳಕ್ಕೆ ಅಕ್ಷರಗಳ ಜೋಡಿಸಿ, ಪದರಚನೆ ಮಾಡಿದನೆಂದೂ ಹಾಗೂ ನಂತರ ಇದು ಪದಬಂಧ ಆಟ ತಾಳಲು ಕಾರಣವಾಯಿತೆಂದೂ ಹೇಳಲಾಗುತ್ತದೆ. ಆದರೆ, ಪತ್ರಿಕೆಯಲ್ಲಿ ಪದಬಂಧ ಮೊದಲು ಮೂಡಿದ್ದು 1913ರ ಡಿಸೆಂಬರ್ 23ರ ಸಂಚಿಕೆಯಲ್ಲಿ. ಕ್ರಿಸ್‍ಮಸ್ ವಿಶೇಷಾಂಕದಲ್ಲಿ ಏನಾದರೊಂದು ವಿಶೇಷ ಆಳವಡಿಸಬೇಕೆಂದು ನಿರ್ಧರಿಸಿದ ದಿ ನ್ಯೂಯರ್ಕ್ ಟೈಂಸ್ ಪತ್ರಿಕೆಯ ಸಂಪಾದಕ ಆರ್ಥರ್ ವೈನ್ ಪದಗಳ ಆಟದೊಂದಿಗೆ ಓದುಗರ ನೋಟವನ್ನು ಸೆಳೆಯಲು ವರ್ಡ್ ಕ್ರಾಸ್ ಎಂಬ ಅಂಕಣವನ್ನು ಪ್ರಕಟಿಸಿದ. ನಂತರ, ಆ ಆಂಕಣ ಎಷ್ಟು ಜನಪ್ರಿಯತೆ ಗಳಿಸಿತೆಂದರೆ ಇತರೆ ಪತ್ರಿಕೆಗಳೂ ಇಂತಹುದೇ ಅಂಕಣವನ್ನು ತಮ್ಮ ವಾರದ ಪುರವಣಿಗಳಲ್ಲಿ ಪ್ರಕಟಿಸುವುದು ಅನಿವಾರ್ಯವಾಯಿತು. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಇವುಗಳಿಂದ ಮಿದುಳಿನ ಆರೋಗ್ಯ ಹೆಚ್ಚುತ್ತದೆಯಂತೆ. ಈ ಬಗ್ಗೆ ಸಮೀಕ್ಷೆಗೆ ಒಳಪಡಿಸಿದಾಗ ತಿಳಿದು ಬಂದ ಅಂಶ ಏನೆಂದರೆ ಗಮನ ಕೇಂದ್ರೀಕರಣ, ನೆನಪಿನ ಶಕ್ತಿ ಜತೆ ಮಿದುಳು ಚುರುಕಾಗಿ ಕೆಲಸ ಮಾಡಲು ಇದು ಸಹಕಾರಿ ಆಗಿದೆಯಂತೆ. ಮಿದುಳು ಸಂಬಂಧಿ ಕಾಯಿಲೆಗಳ ನಿವಾರಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಮಾನಸಿಕ ಸಮಸ್ಯೆಗಳಿಂದ ದೂರ ಇರಲು ಇದು ಸಹಕಾರಿ ಎನ್ನುತ್ತಾರೆ ತಜ್ಞರು.