ನೂತನ ಹರಿಹರೇಶ್ವರ ದೇವಾಲಯ ಲೋಕಾರ್ಪಣೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.26: ದೇವಾಲಯಗಳನ್ನು ನಿರ್ಮಿಸುವುದಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಅವುಗಳ ದೈನಂದಿನ ನಿರ್ವಹಣೆಗೂ ನೀಡಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕರೆ ನಿಡಿದರು.
ತಾಲೂಕಿನ ಹರಿಹರಪುರ ಗ್ರಾಮದಲ್ಲಿ ನಿರ್ಮಿಸಲಾಗಿರುವ ನೂತನ ಹರಿಹರೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿನನಿತ್ಯದ ಪೂಜೆಗಳು ನಿಯಮಾನುಸಾರ ನಡೆದಾಗ ಮಾತ್ರ ಗ್ರಾಮಕ್ಕೆ ಶ್ರೇಯಸ್ಸು. ಪೂಜಾ ಕೈಂಕರ್ಯಗಳಿಗೆ ನೀಡುವಷ್ಟೇ ಆದ್ಯತೆಯನ್ನು ದೇವಾಲಯದ ಆವರಣದ ಸ್ವಚ್ಚತೆಗೂ ನೀಡಬೇಕು ಎಂದ ಸಿ.ಎಸ್.ಪುಟ್ಟರಾಜು ದೇವಾಲಯ ನಿರ್ಮಾಣಗಳಿಂದ ನಾವು ಸಾಂಸ್ಕೃತಿಕ ಭಾರತವನ್ನು ನಿರ್ಮಿಸಲು ಸಾಧ್ಯ ಎಂದರು. ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿಶಿಷ್ಠವಾದ ಭೈರವ ದೇವಾಲಯವನ್ನು ಆದಿ ಚುಂಚನಗಿರಿ ಕ್ಷೇತ್ರದಲ್ಲಿ ನಿರ್ಮಿಸಿದ ಭೈರವೈಕ್ಯ ಡಾ.ಬಾಲಗಂಗಾಧರ ನಾಥ ಶ್ರೀಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಸಿ.ಎಸ್.ಪಿ ದೇವಾಲಯವನ್ನು ನಿರ್ಮಿಸುವವರು ದಯಮಾಡಿ ಶಿಲಾ ದೇಗುಲಗಳನ್ನೇ ನಿರ್ಮಿಸಿ. ಸಿಮೆಂಟ್ ಕಾಂಕ್ರಿಟ್ ನಿರ್ಮಿತ ದೇವಾಲಯಗಳಿಗೆ ಆಯಸ್ಸು ಕಡಿಮೆ. ಆದರೆ ಶಿಲಾ ದೇಗುಲಗಳು ಸಾವಿರಾರು ವರ್ಷ ಕಳೆದರೂ ಸಧೃಡವಾಗಿರುತ್ತವೆ. ನಾವು ಮಾಡುವ ಕೆಲಸಗಳು ಪರಮಾತ್ಮನ ಪಾದಸ್ಪರ್ಶ ಮಾಡುವಂತಿರಬೇಕೆಂದರು.
ಗ್ರಾಮಗಳಲ್ಲಿ ರಾಜಕೀಯ ಸಹಜ. ಆದರೆ ಗ್ರಾಮಗಳ ಅಭಿವೃದ್ದಿಗೆ ಎಲ್ಲರೂ ಒಗ್ಗೂಡಬೇಕು. ಹರಿಹರಪುರ ಸ್ಥಳಾಂತರಿತ ಗ್ರಾಮ. ಕಳೆದ 75 ವರ್ಷಗಳ ಹಿಂದೆ ಈ ಗ್ರಾಮ ಸ್ಥಳಾಂತರಗೊಂಡಿದ್ದು ಹಳೆಯ ಹರಿಹರಪುರದಲ್ಲಿ ಹೊಯ್ಸಳ ನಿರ್ಮಿತ ಹರಿಹರೇಶ್ವರ ದೇವಾಲಯವಿದೆ. ಹೊಸ ದೇವಾಲಯ ನಿರ್ಮಿಸಿದ ಮಾತ್ರಕ್ಕೆ ಹಳೆಯ ದೇವಾಲಯವನ್ನು ನಿರ್ಲಕ್ಷಿಸಬೇಡಿ. ಹಳೆಯ ದೇವಾಲಯದ ಜೀರ್ಣೋದ್ದಾರಕ್ಕೂ ಶ್ರಮಿಸಿ. ಹಳೆಯ ದೇವಾಲಯದಲ್ಲಿಯೂ ಹರಿಹರೇಶ್ವರನಿಗೆ ನಿತ್ಯ ಪೂಜೆ ನಡೆಯುವಂತಾಗಲಿ. ಕ್ಷೇತ್ರದಲ್ಲಿ ಅತ್ಯುತ್ತಮ ಶಾಸಕರಿದ್ದಾರೆ. ದೇವಾಲಯ ಅಭಿವೃದಿಗೆ ಶಾಸಕರ ಸಹಕಾರವನ್ನೂ ಪಡೆದುಕೊಳ್ಳಿ. ಶಾಸಕರ ಜೊತೆ ಸೇರಿ ನಾನು ನನ್ನ ಕೈಲಾದ ಸಹಕಾರ ನೀಡುತ್ತೇನೆ ಎಂದ ಸಿ.ಎಸ್.ಪುಟ್ಟರಾಜು ತಾವು ಸಮೀಪದ ಹೇಮಗಿರಿಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಹರಿಹರಪುರ ಗ್ರಾಮಕ್ಕೆ ಟೆಂಟ್ ಸಿನಿಮಾ ನೋಡಲು ಬರುತ್ತಿದ್ದ ದಿನಗಳನ್ನು ಸ್ಮರಿಸಿದರು. ಹರಿಹರಪುರ ಗ್ರಾಮದ ಅಭಿವೃದ್ದಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆಯನ್ನು ಸ್ಮರಿಸಿದ ಪುಟ್ಟರಾಜು ಹರಿಹರಪುರ ಗ್ರಾಮದ ಹೈಸ್ಕೂಲ್ ನೀಡಿ ಅದನ್ನು ಉದ್ಘಾಟಿಸಿದವರು ಹೆಚ್.ಡಿ.ದೇವೇಗೌಡರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಟಿ.ಮಂಜು ಕೆ.ಆರ್.ಪೇಟೆ ತಾಲೂಕು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಹರಿಹರಪುರದ ಆಂಜನೇಯಸ್ವಾಮಿ ರಥೋತ್ಸವದಿಂದ ಹಿಡಿದು ಅಕ್ಕಿಹೆಬ್ಬಾಳು, ಹೇಮಗಿರಿ, ಹೊಸಹೊಳಲು, ಗವಿರಂಗನಾಥ, ಗವೀಮಠ, ಮಡುವಿನಕೋಡಿ ಸೇರಿದಂತೆ ಹಲವಾರು ಗ್ರಾಮಗಳಲಿ ರಥೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಹೊಸಹೊಳಲು, ಗೋವಿಂದನಹಳ್ಳಿ, ಸಿಂಧಘಟ್ಟ, ಅಗ್ರಹಾರಬಾಚಹಳ್ಳಿ, ಬಸದಿ, ಭೂ ವರಾಹನಾಥ, ಕಿಕ್ಕೇರಿ, ಅಘಲಯ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಶಿಲ್ಪಕಲಾ ವೈಭವನ್ನು ಮೇಳೈಸಿಕೊಂಡಿರುವ ಐತಿಹಾಸಿಕ ಪುರಾತನ ದೇವಾಲಯಗಳಿವೆ. ಹರಿಹರಪುರ ಪಾಳೇಗಾರರು ಕಟ್ಟಿ ಆಳಿದ ಭೂಮಿ. ಈ ಗ್ರಾಮದ ಬಗ್ಗೆ ನನಗೆ ವಿಶೇಷ ಪ್ರೀತಿಯಿದೆ. ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲ. ನಾನು ವಿರೋಧ ಪಕ್ಷದ ಶಾಸಕನಾಗಿದ್ದರೂ ಅಭಿವೃದ್ದಿಯ ವಿಚಾರದಲ್ಲಿ ಎದೆಗುಂದುವುದಿಲ್ಲ. ನಾನು ಹೋರಾಟದ ನೆಲಗಟ್ಟಿನಲ್ಲಿ ಬಂದವನು. ಅಭಿವೃದ್ದಿಗಾಗಿ ಅಗತ್ಯ ಹೋರಟ ಮಾಡುತ್ತೇನೆ. ಜನರ ಸಹಕಾರದಿಂದ ಶಾಸಕನ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿರ್ವಹಿಸಿ ಕ್ಷೇತ್ರದ ಜನರಿಗೆ ಗೌರವ ತರುತ್ತೇನೆ. ಹರಿಹರಪುರ ಸ್ಥಳಾಂತರಿತ ಗ್ರಾಮವಾಗಿದ್ದು ಇ-ಸ್ವತ್ತು, ಸ್ಮಶಾನ ಮತ್ತಿತರ ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇಂದು ಉದ್ಘಾಟನೆಗೊಂಡಿರುವ ನೂತನ ದೇವಾಲಯಕ್ಕೆ ಅಗತ್ಯವಾದ ಕಾಂಪೌಂಡ್ ಮತ್ತು ಹಸಿರು ಉದ್ಯಾನ ನಿರ್ಮಾಣಕ್ಕೆ ನನ್ನ ಸಹಕಾರ ನೀಡುತ್ತೇನೆಂದರು.
ಮನ್ ಮುಲ್ ನಿರ್ದೇಶಕ ಡಾಲು ರವಿ, ಮನ್ ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಮ್ಮ ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕರಾದ ಟಿ.ಬಲದೇವ್, ಮಂಜುನಾಥ್, ಜೆಡಿಎಸ್, ಗ್ರಾಮ ಮುಖಂಡರಾದ ರಾಮಕೃಷ್ಣೇಗೌಡ,ಹೆಚ್.ಎಸ್.ರಾಮೇಗೌಡ, ಹೆಚ್.ವಿ.ಗಣೇಶ್, ಮಹದೇವೇಗೌಡ, ಕುರ್ನೇನಹಳ್ಳಿ ಬಲರಾಮೇಗೌಡ, ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ, ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಸೇರಿದಂತೆ ದೇವಾಲಯ ಸಮಿತಿಯ ಟ್ರಸ್ಟಿಗಳು ಉಪಸ್ಥಿತರಿದ್ದರು.