ನೂತನ ಸಿಜೆಐ ನೇಮಕ ಕೊಜಿಜಿಯಂ ಮಹತ್ವದ ಸಭೆ

ನವದೆಹಲಿ, ಆ.೩- ಸರ್ವೋಚ್ಛ ನ್ಯಾಯಾಲಯದ ಮುಂದಿನ ಮುಖ್ಯ ನ್ಯಾಯಮೂರ್ತಿ ನೇಮಕ ಸಂಬಂಧ ಮುಖ್ಯನ್ಯಾಯಮೂರ್ತಿ ಎನ್. ವಿ ರಮಣ ನೇತೃತ್ವದ ಕೊಲಿಜಿಯಂ ಮಹತ್ವದ ಸಭೆ ನಡೆಸಿತು.
ಹಾಲಿ ಮುಖ್ಯನ್ಯಾಯಮೂರ್ತಿ ಎನ್.ವಿ ರಮಣ, ಅವರು ಇದೇ ೨೬ ರಂದು ನಿವೃತ್ತರಾಗಲಿರುವ ಕಾರಣ ಮುಂದಿನ ಮುಖ್ಯ ನ್ಯಾಯಮೂರ್ತಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.
ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರಲ್ಲದೆ, ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳಾದ ಯು. ಯು ಲಲಿತ್, ಡಿ.ವೈ ಚಂದ್ರಚೂಡ್, ಸಂಜಯ್ ಕಿಶನ್ ಕೌಲ್ ಮತ್ತು ಅಬ್ದುಲ್ ನಜೀರ್ ಇದ್ದಾರೆ.
ನೇಮಕಾತಿಗಳಿಗೆ ಸಂಬಂಧಿಸಿದ ಕೊಲಿಜಿಯಂ ಕೆಲವು ಹೆಸರುಗಳನ್ನು ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ.
ಮೆಮೊರಾಂಡಮ್ ಆಫ್ ಪ್ರೊಸೀಜರ್ ಪ್ರಕಾರ, ಮುಖ್ಯ ನ್ಯಾಯಾದೀಶರ ನೇಮಕಾತಿಯ ಪ್ರಕ್ರಿಯೆಯಲ್ಲಿ ಮುಂದಿನ ಮುಖ್ಯನ್ಯಾಯಮೂರ್ತಿ ನೇಮಕಕ್ಕೆ ಸಂಬಂಧಿಸಿದಂತೆ ನಿರ್ಗಮಿತ ಮುಖ್ಯ ನ್ಯಾಯಾದೀಶರ ಸಲಹೆ ಮತ್ತು ಶಿಫಾರಸ್ಸು ಕೇಳುವುದು ವಾಡಿಕೆ.
ಅಲ್ಲದೆ ಮುಖ್ಯ ನ್ಯಾಯಾಧೀಶರ ನೇಮಕಾತಿಯಲ್ಲಿ ಅತ್ಯಂತ ಹಿರಿಯ ನ್ಯಾಯಾಧೀಶರನ್ನು ನೇಮಕ ಮಾಡಲಾಗುತ್ತದೆ. ಮುಖ್ಯ ನ್ಯಾಯಾಧೀಶರ ನಿವೃತ್ತಿಯ ಒಂದು ತಿಂಗಳ ಮುನ್ನ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಮುಖ್ಯ ನ್ಯಾಯಾಧೀಶರ ಕಚೇರಿಯಲ್ಲಿ ಉತ್ತರಾಧಿಕಾರಿಯ ಶಿಫಾರಸಿನ ಕುರಿತು ಯಾವುದೇ ಟಿಪ್ಪಣಿ ಸ್ವೀಕರಿಸಲಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿ ತಿಳಿಸಿದೆ.
ಯು ಯು ಲಲಿತ್
ಮುಂದಿನ ಸಿಜೆಐ?

ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಯು.ಯು ಲಲಿತ್ ಮುಂದಿನ ಮುಖ್ಯನ್ಯಾಯ ಮೂರ್ತಿ ಆಗುವ ಸರದಿಯಲ್ಲಿದ್ದಾರೆ. ೨೦೨೨ ರ ನವಂಬರ್ ೮ ರಂದು ನಿವೃತ್ತರಾಗುವ ಮೂರು ತಿಂಗಳ ಅಧಿಕಾರಾವಧಿ ಹೊಂದುವ ನಿರೀಕ್ಷೆ ಇದೆ.
ನ್ಯಾಯಮೂರ್ತಿ ಎಸ್‌ಎಂ ಸಿಕ್ರಿ ನಂತರ ನೇರವಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡ ನ್ಯಾಯಮೂರ್ತಿ ಯು.ಯು ಲಲಿತ್ ಎರಡನೇ ಸಿಜೆಐ ಆಗಲಿದ್ದಾರೆ. ಜಸ್ಟಿಸ್ ಸಿಕ್ರಿ ಅವರು ಜನವರಿ ೧೯೭೧ ರಿಂದ ಏಪ್ರಿಲ್ ೧೯೭೩ ರವರೆಗೆ ಮುಖ್ಯ ನ್ಯಾಯಮೂರ್ತಿ ಆಗಿದ್ದರು.