ಶಿವಮೊಗ್ಗ, ಜೂ. 3: ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ
ಶಿವಮೊಗ್ಗಕ್ಕೆ ಆಗಮಿಸಿದ ಮಧು ಬಂಗಾರಪ್ಪ ಅವರಿಗೆ ಶನಿವಾರ ಜಿಲ್ಲಾ ಕಾಂಗ್ರೆಸ್
ಪಕ್ಷದಿಂದ ಅದ್ದೂರಿ ಸ್ವಾಗತ ಕೋರಲಾಯಿತು.
ಎಂ.ಆರ್.ಎಸ್. ವೃತ್ತದಿಂದ ಮಧು ಬಂಗಾರಪ್ಪರವರನ್ನು ಮೆರವಣಿಗೆಯಲ್ಲಿ ಕಾರ್ಯಕರ್ತರು
ಕರೆತಂದರು. ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಮೆರವಣಿಗೆಯ ಮಾರ್ಗ ಮಧ್ಯೆ
ಬೃಹತ್ ಹಾರಗಳನ್ನು ಹಾಕಿ ಕಾರ್ಯಕರ್ತರು ಸ್ವಾಗತ ಕೋರುತ್ತಿದ್ದುದು ಕಂಡುಬಂದಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಧು ಬಂಗಾರಪ್ಪ ಅವರು ಮಾತನಾಡಿ, ಮಕ್ಕಳಿಗೆ ಶಿಕ್ಷಣ
ಕೊಡುವ ಇಲಾಖೆಯ ಜವಾಬ್ದಾರಿ ಸಿಕ್ಕಿರುವುದು ಸಂತಸ ಉಂಟು ಮಾಡಿದೆ. ಅತ್ಯಂತ ಸಮರ್ಥವಾಗಿ
ಖಾತೆ ನಿರ್ವಹಣೆ ಮಾಡುತ್ತೆನೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ
ಅಭಿವೃದ್ದಿಗೆ ಶ್ರಮಿಸುತ್ತೆನೆ ಎಂದು ತಿಳಿಸಿದ್ದಾರೆ.
ಸನ್ಮಾನ ಸಮಾರಂಭ: ಲಗನ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸನ್ಮಾನ ಸಮಾರಂಭವನ್ನು
ಆಯೋಜಿಸಲಾಗಿತ್ತು. ಸನ್ಮಾನ ಸ್ವೀಕರಿಸಿದ ನಂತರ ಮಧು ಬಂಗಾರಪ್ಪರವರು
ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ
ವಿಜೃಂಭಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತೆನೆ ಎಂದು ತಿಳಿಸಿದ್ದಾರೆ.
ಸಚಿವನಾಗಿ ಕಾರ್ಯನಿರ್ವಹಣೆ ಮಾಡುವ ಅವಕಾಶ ಲಭ್ಯವಾಗಿದೆ. ಇದನ್ನು ಸವಾಲಾಗಿ
ತೆಗೆದುಕೊಂಡು ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡುವುದಾಗಿ ಹೇಳಿದ್ದಾರೆ.
ಸಮಾರಂಭದಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ್
ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಅಧಿಕಾರಿಗಳ ಸಭೆ : ಮಧ್ಯಾಹ್ನ ನಗರದ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಹಿರಿಯ
ಅಧಿಕಾರಿಗಳೊಂದಿಗೆ ಮಧು ಬಂಗಾರಪ್ಪ ಅವರು ಅನೌಪಚಾರಿಕ ಸಭೆ ನಡೆಸಿದರು. ಸಭೆಯಲ್ಲಿ
ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು
ಉಪಸ್ಥಿತರಿದ್ದರು.