ನೂತನ ಸಂಸತ್ ಭವನ ಭಾರತೀಯರ ಹೆಮ್ಮೆಯ ಪ್ರತೀಕ

ಮೋದಿ ಬಣ್ಣನೆ
ನವದೆಹಲಿ,ಮೇ.೨೭- ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಪ್ರತೀಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಹೊಸ ಸಂಸತ್ ಭವನದ ಒಳಾಂಗಣ ವಿಡಿಯೋ ಅನ್ನು ದೇಶದ ಜನರು ಟ್ವಿಟರನಲ್ಲಿ ’ಮೈ ಪಾರ್ಲಿಮೆಂಟ್ ಮೈ ಪ್ರೈಡ್’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ತಮ್ಮ ವಾಯ್ಸ್‌ಓವರ್‍ನೊಂದಿಗೆ ವೀಡಿಯೊ ಹಂಚಿಕೊಳ್ಳಿ ಎಂದು ಕರೆ ನೀಡಿದ್ದಾರೆ.ಪ್ರಧಾನಿಯಾಗಿ ನಾಳೆಗೆ ೯ ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ನಾಳೆಯೇ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಖುಷಿ ಪಡುವ ಸಂಗತಿ ಎಂದಿದ್ದಾರೆ.
ನಾಳೆ ಮುಂಜಾನೆ ಹವನ ಮತ್ತು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಬಳಿಕ ಸಂಸತ್ ಭೌನವನ್ನು ಔಪಚಾರಿಕವಾಗಿ ಉದ್ಘಾಟನೆ ಮಾಡಲಿದ್ದಾರೆ. ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ೨೫ ಪಕ್ಷಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ೨೦ ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ.
ಹೊಸ ಸಂಸತ್ ಕಟ್ಟಡವನ್ನು ಮೇ ೨೮ ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಬೇಕು ಎಂಬ ನಿರ್ದೇಶನ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿರುವುದ ಸಂಸತ್ ಭವನ ಉದ್ಘಾಟನೆಗೆ ಇದ್ದ ಅಡೆ ತಡೆ ನಿವಾರಣೆಯಾಗಿದೆ.
ಸೆಂಗೋಲ್ ಸ್ಥಾಪನೆ:
ನಾಳೆ ಬೆಳಿಗ್ಗೆ ೭ ಗಂಟೆಗೆ ಹೊಸ ಸಂಸತ್ ಭವನ ಉದ್ಘಾಟನೆ ಹೊರಗೆ ಹವನ ನಡೆಯಲಿದೆ ಮತ್ತು ಶೈವ ಧರ್ಮದ ಪ್ರಧಾನ ಅರ್ಚಕರಿಂದ ವಿಧ್ಯುಕ್ತ ರಾಜದಂಡ ಸೆಂಗೋಲ್ ಅನ್ನು ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೂತನ ಸಂಸತ್ ಭವನದ ಸ್ಪೀಕರ್ ಪೀಠದ ಬಳಿ ಸೆಂಗೋಲ್ ಅಳವಡಿಸಲು ನಿರ್ಧರಿಸಲಾಗಿದೆ.ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಇತರರು ಹೊಸ ಸಂಕೀರ್ಣದ ಔಪಚಾರಿಕ ಉದ್ಘಾಟನೆಯ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಸಂಸತ್ ಕಟ್ಟಡ ೬೪,೫೦೦ ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಕಟ್ಟಡ ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ.ಅದಕ್ಕೆ ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಡಲಾಗಿದೆ.ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಹೊಸ ಸಂಸತ್ತಿನ ಕಟ್ಟಡ ಸ್ವಾಗತಾರ್ಹ ಸೇರ್ಪಡೆಯಾಗಿದೆ ಹೇಳಿದ ಅವರು. ಉದ್ಘಾಟನಾ ಸಮಾರಂಭ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ, ಎಸ್‌ಪಿ ಮತ್ತು ಎಎಪಿ ಸೇರಿದಂತೆ ೧೯ ಪ್ರತಿಪಕ್ಷಗಳು ಒಗ್ಗೂಡಿ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಸತ್ ಭವನದ ಉದ್ಘಾಟನೆ ಬಹಿಷ್ಕರಿಸಿವೆ.