
ನವದೆಹಲಿ,ಮೇ೨೬- ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲು ಮುಂದಾಗಿರುವುದನ್ನು ಖಂಡಿಸಿ ೨೧ ಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಆದರೆ, ಎನ್‌ಡಿಎ ಮೈತ್ರಿಕೂಟದ ೨೫ ಪಕ್ಷಗಳು ಈ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿವೆ.
ನಾಡಿದ್ದು ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಬೇಕು ಎನ್ನುವುದು ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋದ ಪಕ್ಷಗಳ ಬೇಡಿಕೆಯಾಗಿದೆ. ಈ ವಿಷಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.ಸಂಸತ್ ಭವನದ ಉದ್ಘಾಟನೆ ವಿವಾದ ಮತ್ತು ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ವಿರುದ್ದ ಆರೋಪ ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿದೆ.ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಸಂಸತ್ ಭವನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದೇನೆ, ದೇಶದ ಜನರ ತೆರಿಗೆ ಹಣದಲ್ಲಿ ಆ ಭವ್ಯ ಕಟ್ಟಡ ನಿರ್ಮಾಣವಾಗಿದೆ.ಇದು ದೇಶಕ್ಕೆ ಸೇರಿದ್ದು, ಇದು ಬಿಜೆಪಿ ಅಥವಾ ಆರ್ ಎಸ್ ಎಸ್ ಕಚೇರಿಯಲ್ಲ ಎಂದು ಹೇಳಿದ್ದಾರೆ.
ಹೊಸ ಸಂಸತ್ತಿನ ಉದ್ಘಾಟನೆಗೆ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಬೆಂಬಲ ವ್ಯಕ್ತಪಡಿಸಿದ್ದು “ಹೊಸ ಸಂಸತ್ತಿನ ಕಟ್ಟಡ ಪರಿವರ್ತನಾ ನೀತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ವಾಸಸ್ಥಾನವಾಗಬೇಕೆಂದು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಬೆಂಬಲ ಸೂಚಿಸಿದ ಪಕ್ಷಗಳು:
ಶಿವಸೇನೆ (ಶಿಂಧೆ ಬಣ), ನ್ಯಾಷನಲ್ ಪೀಪಲ್ಸ್ ಪಾರ್ಟಿ, ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪೊರೀಗ್ರೆಸಿವ್ ಪಾರ್ಟಿ, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ,ಜನ-ನಾಯಕ್ ಪಕ್ಷ, ಎಐಎಡಿಎಂಕೆ, ಐಎಂಕೆಎಂಕೆ, ಮಿಜೋ ನ್ಯಾಷನಲ್ ಫ್ರಂಟ್, ತಮಿಳು ಮಾನಿಲ ಕಾಂಗ್ರೆಸ್, ಬೋಡೋ ಪೀಪಲ್ಸ್ ಪಾರ್ಟಿ, ಪಾಟ್ಟಾಳಿ ಮಕ್ಕಳ್ ಕಚ್ಚಿ, ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ, ಅಪ್ನಾ ದಳ ಮತ್ತು ಅಸ್ಸಾಂ ಗನ್ ಪರಿಷತ್ತು. ಈ ಪಕ್ಷಗಳು ಎನ್‌ಡಿಎ ಮೈತ್ರಿಕೂಟದ ಭಾಗವಾಗಿವೆ.
ಎನ್‌ಡಿಎಯೇತರ ಪಕ್ಷಗಳಾದ ಲೋಕ ಜನಶಕ್ತಿ ಪಕ್ಷ (ಪಾಸ್ವಾನ್), ಬಿಜೆಡಿ, ಬಿಎಸ್‌ಪಿ, ಟಿಡಿಪಿ, ವೈಎಸ್‌ಆರ್‍ಸಿಪಿ, ಅಕಾಲಿದಳ ಮತ್ತು ಜೆಡಿ ಎಸ್ ಪಕ್ಷಗಳ ಪ್ರತಿನಿಧಿಗಳು ಉದ್ಘಾಟನಾ ಸಮಯದಲ್ಲಿ ಪಾಲ್ಗೊಳಲು ಬೆಂಬಲ ಸೂಚಿಸಿವೆ.
ಬಹಿಷ್ಕರಿಸಿದ ಪಕ್ಷಗಳು
ಸಂಸದ್ ಭವನ ಪ್ರಧಾನಿ ಉದ್ಘಾಟನೆ ಮಾಡುವುದನ್ನು ವಿರೋಧಿಸಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ), ಡಿಎಂಕೆ, ಜನತಾ ದಳ ?ಯು ,ಎಎಪಿ, ಸಿಪಿಐ-ಎಂ, ಸಿಪಿಐ, ಎಸ್‌ಪಿ, ಎನ್ ಸಿಪಿ, ಶಿವಸೇನೆ ಉದ್ದವ್ ಠಾಕ್ರೆ ಬಣ, ಆರ್ ಜೆಡಿ, ಐಯುಎಂಎಲ್, ಜೆಎಂಎಂ, ಎನ್ ಸಿ, ಕೆಸಿಎಂ, ಆರ್ ಎಸ್ಪಿ, ವಿಸಿಕೆ, ಎಂಡಿಎಂಕೆ ಮತ್ತು ಆರ್ ಎಲ್ ಡಿ ಪಕ್ಷಗಳು ಕಾರ್ಯಕ್ರಮ ಉದ್ಘಾಟನೆ ಬಹಿಷ್ಕರಿಸಿವೆ.
೭೫ ರೂ ವಿಶೇಷ ನಾಣ್ಯ ಬಿಡುಗಡೆ
ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ ೭೫ ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಪ್ರಕಟಿಸಿದೆ.ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ ನಾಣ್ಯವು ೭೫ ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವವಾಗಿಯೂ ಕಾರ್ಯನಿರ್ವಹಿಸುತ್ತದೆ.ನಾಣ್ಯದ ಒಂದು ಬದಿಯು ಅಶೋಕ ಸ್ತಂಭದ ಸಿಂಹದ ಚಿತ್ರವನ್ನು ಹೊಂದಿರುತ್ತದೆ, ಅದರ ಕೆಳಗೆ “ಸತ್ಯಮೇವ ಜಯತೆ” ಎಂಬ ಪದಗಳಿವೆ. ಎಡಭಾಗದಲ್ಲಿ “ಭಾರತ್” ಎಂಬ ಪದವನ್ನು ದೇವನಾಗರಿ ಲಿಪಿಯಲ್ಲಿ ಹಾಗೂ ಬಲಭಾಗದಲ್ಲಿ “ಇಂಡಿಯಾ” ಎಂಬ ಪದವನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ.ಈ ನಾಣ್ಯದ ಇನ್ನೊಂದು ಬದಿಯು ಸಂಸತ್ತಿನ ಸಂಕೀರ್ಣದ ಚಿತ್ರವನ್ನು ತೋರಿಸುತ್ತದೆ. “ಸಂಸದ್ ಸಂಕುಲ್” ಪದಗಳನ್ನು ಮೇಲಿನ ಪರಿಧಿಯಲ್ಲಿ ದೇವನಾಗರಿ ಲಿಪಿಯಲ್ಲಿ ಮತ್ತು ಕೆಳಗಿನ ಪರಿಧಿಯಲ್ಲಿ “ಪಾರ್ಲಿಮೆಂಟ್ ಕಾಂಪ್ಲೆಕ್ಸ್” ಅನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ ಎಂದು ಸಚಿವಾಲಯದ ಪ್ರಮುಖರು ಮಾಹಿತಿ ನೀಡಿದ್ದಾರೆ.