ನೂತನ ಸಂಸತ್ ಭವನ ಏಕೆ:ಪವಾರ್ ಪ್ರಶ್ನೆ

ಔರಂಗಾಬಾದ್,ಜೂ.೭- “ಹೊಸ ಸಂಸತ್ ಭವನದ ಅವಶ್ಯಕತೆ ಏಕೆ ಎನ್ನುವುದೇ ನನಗೆ ಇಂದಿಗೂ ಅರ್ಥವಾಗದ ಸಂಗತಿ ಎಂದು ನೂತನ ಸಂಸತ್ ಭವನ ನಿರ್ಮಾಣದ ಔಚಿತ್ಯವನ್ನು ಎನ್ ಸಿಪಿ ವರಿಷ್ಠ ಶರದ್ ಪ್ರವಾರ್ ಪ್ರಶ್ನಿಸಿದ್ದಾರೆ.
ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಆದರೆ ಹೊಸ ಸಂಸತ್ ಭವನದ ನಿರ್ಮಾಣ ಯಾಕೆ ಮಾಡಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಮಹಾತ್ಮಾ ಗಾಂಧಿ ಮಿಷನ್ ವಿಶ್ವವಿದ್ಯಾಲಯದಲ್ಲಿ ನಡೆದ ಸೌಹಾರ್ದ ಬೈಠಕ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಚುನಾಯಿತ ನಾಯಕರಿಗೆ ಮೊದಲು ಹೊಸ ಕಟ್ಟಡಕ್ಕೆ ಪ್ರವೇಶಿಸುವ ಅವಕಾಶ ಸಿಗಲಿಲ್ಲ ಬದಲಾಗಿ ‘ಹೊಸ ಸಂಸತ್ ಭವನದ ಮೊದಲ ಫೊಟೋ ಹೊರಬಿದ್ದಿದ್ದು ಚುನಾಯಿತ ಸದಸ್ಯರೊಂದಿಗೆ ಅಲ್ಲ ಬದಲಾಗಿ ಕೇಸರಿ ಬಟ್ಟೆ ತೊಟ್ಟಿರುವವರ ಜೊತೆ’ ಎಂದು ದೂರಿದ್ಧಾರೆ
ಸಂಸತ್ತಿನ ಚಟುವಟಿಕೆಗಳಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳುವಲ್ಲಿ ಸಾಮಾನ್ಯ ಕುಸಿತ ಕಂಡುಬಂದಿದೆ.ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನ ನಡೆಸಲಾಗಿತ್ತು. ಆದರೆ ಈಗ ಆ ರೀತಿಯ ಪ್ರಯತ್ನ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
“ಸರ್ಕಾರದ ಪ್ರಮುಖ ವ್ಯಕ್ತಿಗಳು ನಿಯಮಿತವಾಗಿ ಸಂಸತ್ತಿನ ಅಧಿವೇಶನಗಳಿಗೆ ಹಾಜರಾಗುವುದಿಲ್ಲ. ಸರ್ಕಾರದ ಮುಖ್ಯಸ್ಥರು ಒಂದು ದಿನ ಸಂಸತ್ತಿಗೆ ಬಂದರೆ, ಆ ದಿನ ವಿಭಿನ್ನವಾಗಿರುತ್ತದೆ. ಸಂಸತ್ತು ಎಲ್ಲಕ್ಕಿಂತ ಹೆಚ್ಚು, ಅದಕ್ಕೆ ಪ್ರಾಮುಖ್ಯತೆ ನೀಡದಿದ್ದರೆ, ಜನರ ಗ್ರಹಿಕೆಯೇ ತಪ್ಪಾಗಿ ಬಿಡುತ್ತದೆ ಎಂದು ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬದಿಗಿಟ್ಟಿದ್ದರಿಂದ ೨೦ ಪ್ರತಿ ಪಕ್ಷಗಳು ಸಂಸತ್ ಭವನ ಉದ್ಘಾಟನೆಯನ್ನು ಬಹಿಷ್ಕಾರ ಮಾಡಿದ್ದೆವು ಎಂದು ತಮ್ಮ ಕ್ರಮವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.