ನೂತನ ಶಿಕ್ಷಣ ನೀತಿಯಿಂದ ೨೧ನೇ ಶತಮಾನದ ಅಗತ್ಯ ಪೂರೈಕೆ

ನವದೆಹಲಿ.ಸೆ೨೦:ದೇಶದ ಶಿಕ್ಷಣದ ಅವಶ್ಯಕತೆಯನ್ನು ನೂತನ ಶಿಕ್ಷಣದ ನೀತಿ ಪೂರೈಸಲಿದೆ, ಶಿಕ್ಷಣದ ಅಗತ್ಯತೆ ಪುನರ್ ಮರು ಹೊಂದಾಣಿಕೆ ಮಾಡುವ ಜೊತೆಗೆ ೨೧ನೇ ಶತಮಾನದ ಶಿಕ್ಷಣದ ಅವಶ್ಯಕತೆಗಳು ನೂತನ ಶಿಕ್ಷಣ ನೀತಿಯಿಂದ ಪೂರ್ಣಗೊಳ್ಳಲಿವೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ನೂತನ ಶಿಕ್ಷಣ ನೀತಿ ಜಾರಿಗೊಂಡರೆ ಜಾಗತಿಕ ಹಂತದಲ್ಲಿ ಭಾರತದ ಉನ್ನತ ಶಿಕ್ಷಣದ ಗುಣಮಟ್ಟ ವೃದ್ಧಿಸಲಿದ್ದು, ಕ್ರೀಡಾ ಚಟುವಟಿಕೆಗಳಿಗೂ ಸಹ ಆದ್ಯತೆ ದೊರೆಯಲಿದೆ. ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಮತ್ತು ರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ನೀಡಬೇಕು, ಸಮುದಾಯ ಪಾಲ್ಗೊಳ್ಳುವಿಕೆ ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು, ಎಲ್ಲರನ್ನು ಒಳಗೊಂಡ ಗುಣಮಟ್ಟದ ಶಿಕ್ಷಣ ದೊರಕಿಸುವುದು ನೂತನ ನೀತಿಯ ಧ್ಯೇಯವಾಗಬೇಕು ಎಂದು ರಾಷ್ಟ್ರಪತಿ ರಾಮಾನಾಥ್ ಕೊವಿಂದ್ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ ಕುರಿತ ಸಮ್ಮೇಳನ ದೆಹಲಿಯಲ್ಲಿ ವರ್ಚುವೆಲ್ ವೇದಿಕೆ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ಉಜ್ವಲ ಜ್ಞಾನ, ಸಮಾನ ಅಭಿವೃದ್ಧಿಯ ದೃಷ್ಟಿಕೋನವನ್ನು ಇದು ಒಳಗೊಂಡಿದ್ದು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸಲಿದೆ ಎಂದರು.
ಈ ನೀತಿ ಹಲವು ಆಯಾಮಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳ ಆಲೋಚನಾ ಕ್ರಮದಲ್ಲಿ ಸಮಗ್ರ ಬದಲಾವಣೆ ತರಲಿದೆ. ಕ್ರಿಯಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡುವ ಗುಣಮಟ್ಟದ ಪಾಠ ಪ್ರವಚನಕ್ಕೆ ಗಮನ ಹರಿಸಲಿದೆ ಎಂದು ಹೇಳಿದರು.
ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರ ಪ್ರಮುಖವಾಗಿದೆ. ಎಲ್ಲ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಪಠ್ಯ ಪುಸ್ತಕ ಸಿದ್ಧಪಡಿಸುವ ಎನ್.ಸಿ.ಆರ್.ಟಿ.ಇ., ಮತ್ತಿತರ ಶೈಕ್ಷಣಿಕ ಸಂಸ್ಥೆಗಳು ಸಹ ನೂತನ ನೀತಿ ಅಳವಡಿಕೆಯಲ್ಲಿ ತನ್ನ ಕೊಡುಗೆ ನೀಡಬೇಕು.
ಎಲ್ಲರೂ ಒಂದೇ ತಂಡದಂತೆ ಕಾರ್ಯ ನಿರ್ವಹಿಸಬೇಕು ಎಂದರು.ಶಿಕ್ಷಣ ನೀತಿ ನಿರೂಪಣೆ ಸಮಿತಿ ಅಧ್ಯಕ್ಷ, ಬಾಹ್ಯಾಕಾಶ ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್, ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಶಿಕ್ಷಣ ತಜ್ಞರು ಮತ್ತಿತರ ಪ್ರಮುಖರು ಸಹ ಉಪಸ್ಥಿತರಿದ್ದರು.