ನೂತನ ಶಾಸಕರಿಗೆ ಬೆಟ್ಟದಷ್ಟು ಸಮಸ್ಯೆಗಳ ಸ್ವಾಗತ;ಧೂಳುಮುಕ್ತ ಸಿರುಗುಪ್ಪ ನಿರೀಕ್ಷೆಯಲ್ಲಿ ಸಾರ್ವಜನಿಕರು


ಜಾಲಿಹಾಳ್ ರಾಜಾಸಾಬ್
ಸಿರುಗುಪ್ಪ, ಮೇ.27: ವಿಧಾನ ಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಕಾಂಗ್ರೆಸ್ ನ ಶಾಸಕ ಬಿ.ಎಂ ನಾಗರಾಜ ಇವರಿಗೆ ಬೆಟ್ಟದಷ್ಟು ಸಮಸ್ಯೆಗಳ ಸರಮಾಲೆ ಇದ್ದು ನೂತನ ಶಾಸಕರು ಸಮಸ್ಯೆಗಳನ್ನು ಪರಿಹರಿಸಬಲ್ಲರು ಎಂಬ ನಿರೀಕ್ಷೆಯಲ್ಲಿ ಜನ ಕಾದುಕುಳಿತಿದ್ದಾರೆ.
ಸಿರುಗುಪ್ಪ ತಾಲ್ಲೂಕು ಸೀಮಾಂಧ್ರ ಗಡಿಗೆ ಹೊಂದಿಕೊಂಡಿದ್ದು ಇಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚು ನಡೆಯುತ್ತವೆ, ಅಕ್ರಮ ಮರಳು ದಂಧೆ ಮತ್ತು ಅಕ್ರಮ ಮದ್ಯ ಸಾಗಣಿಕೆ ಹೆಚ್ಚಾಗಿದೆ, ಇದರ ಜೊತೆಗೆ ಗ್ರಾಮೀಣ, ಪಟ್ಟಣ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಗುಂಡಿ ಬಿದ್ದ ರಸ್ತೆಗಳಿಗೆ ಏನೂ ಕೊರತೆ ಇಲ್ಲ.
ಕೃಷಿಗೆ ಆಧಾರವಾಗಿರುವ ತುಂಗಭದ್ರ ನದಿ ಹಾಗೂ ಹಗರಿ (ವೇದಾವತಿ) ನದಿ ಹರಿಯುತ್ತಿದ್ದರೂ ಕೆಳಭಾಗದ ರೈತರಿಗೆ ಕಾಲುವೆ ನೀರು ಪೂರೈಕೆ ಆಗುತ್ತಿಲ್ಲ. ಕಾಲುವೆ ಕೆಲಸ ಪೂರ್ಣವಾಗಿಲ್ಲ.
ಸಿರುಗುಪ್ಪ ನಗರದಲ್ಲಿ  ರಸ್ತೆ ಅಗಲೀಕರಣ, ಧೂಳುಮುಕ್ತ ನಗರ ನಿರ್ಮಾಣ ಸಾಧ್ಯವೇ ನೂತನ ಶಾಸಕರು ಈ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ಕೆರೆಗೆ ನೀರು ತುಂಬಬೇಕು : ತಾಲ್ಲೂಕಿನಲ್ಲಿ ನಗರ ಸೇರಿದಂತೆ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ತುಂಗಭದ್ರ ನದಿ ಮತ್ತು ಕಾಲುವೆ ಮೂಲದಿಂದ ಕೆರೆಗಳಿಗೆ ನೀರು ತುಂಬಿಸಲು ಹಿಂದಿನ  ಸರ್ಕಾರವು ಕೋಟಿ ವೆಚ್ಚ ಮಾಡಿದ್ದರೂ  ಕೆರೆಗಳಿಗೆ ಸಮರ್ಪಕವಾಗಿ ನೀರು ತುಂಬಿಸಿಲ್ಲ, ಶೀಘ್ರವಾಗಿ ಕೆರೆಗಳಿಗೆ ನೀರು ತುಂಬಿಸಬೇಕು ಎಂಬುದು ಜನರ ಆಗ್ರಹ,  ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಜಾರಿಗೆ ತಂದು ಗ್ರಾಮಸ್ಥರ ನೀರಿನ ಬವಣೆ ನೀಗಿಸಬೇಕಾಗಿದೆ.
 ರಸ್ತೆ ಸಮಸ್ಯೆ :
ತಾಲ್ಲೂಕು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ತಗ್ಗು ರಸ್ತೆಗಳೂ ಒಂದು. ಅನೇಕ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಕೆಲ ರಸ್ತೆಗಳಿಗೆ ಭೂಮಿ ಪೂಜೆಯಾಗಿದ್ದರೂ ಇನ್ನೂ ಕಾಮಗಾರಿ ಶುರುವಾಗಿಲ್ಲ, ಹಚ್ಚೋಳ್ಳಿ  ರಸ್ತೆ ಅರ್ಥಕ್ಕೆ ನಿಂತಿದೆ, ಇದರಿಂದ  ಇಲ್ಲಿನ ಜನರಿಗೆ ದಿನನಿತ್ಯ ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ವಿವಿಧ ಗ್ರಾಮೀಣ ಭಾಗದ ರಸ್ತೆಗಳು ನಿರ್ಮಿಸಿದ ಬೆನ್ನಲೇ ಕಳೆಪೆಯಿಂದ ಹಾಳಾಗಿವೆ. ಸಿರುಗುಪ್ಪ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯು 75*75 ರಸ್ತೆ ನಿರ್ಮಿಸಲು ದಶಕಗಳು ಕಳೆದರು ಹಾಗೇ ಇದೆ. ಇವುಗಳ ದುರಸ್ತಿ ಕಾರ್ಯಕ್ಕೆ ಶೀಘ್ರವಾಗಿ ಚಾಲನೆ ನೀಡಿ ಜನರಿಗೆ ಉಪಯೋಗವಾಗುವಂತೆ ಮಾಡಬೇಕಿದೆ.
ಗಡಿ ಚೆಕ್ ಪೋಸ್ಟ್ :
ತಾಲ್ಲೂಕು ಸೀಮಾಂದ್ರ ಪ್ರದೇಶದ ಸಂಪರ್ಕ ಕೊಂಡಿಯಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳ ಸಾಗಾಟ, ವೇದಾವತಿ ನದಿಯಲ್ಲಿ ಅಕ್ರಮ ಮರಳು ಸಾಗಾಟ, ಅಕ್ರಮ ಮದ್ಯ ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಕರ್ತವ್ಯ ನಿರ್ವಹಿಸುವ ಖಾಕಿ ಇದರ ಬಗ್ಗೆ ಅರಿವಿದ್ದರೂ, ಆಮಿಷಕ್ಕೆ ಒಳಗಾಗಿ ಕಂಡು ಕಾಣದಂತೆ ಇದ್ದಾರೆ. ಇದರ ಬಗ್ಗೆ ಶಾಸಕರು ಗಮನ ನೀಡಿ, ಗಡಿಭಾಗದಲ್ಲಿ ಶಾಶ್ವತ ಚೆಕ್ ಪೋಸ್ಟ್ ನಿರ್ಮಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ರಕ್ಷಿತಾರಣ್ಯ ಪ್ರದೇಶ :
ತಾಲ್ಲೂಕಿನ ಗಡಿಗ್ರಾಮಗಳಲ್ಲಿರುವ ಕಾಯ್ದಿರಿಸಿದ ಅರಣ್ಯ ಪ್ರದೇಶವು ಅಳಿವಿನ ಅಂಚಿನಲ್ಲಿದ್ದು,  ಪ್ರಾಣಿಗಳು ಕಾಡಿನಿಂದ ರೈತರ ಬೆಳೆಗಳ ಮೇಲೆ ಸಾಮಾಹಿಕವಾಗಿ ದಾಳಿಯಿಡುತ್ತವೆ. ಇಲ್ಲಿ ಜಿಂಕೆ ಹಾಗೂ ನವಿಲುಗಳ ಹಾವಳಿ ಹೆಚ್ಚು, ಇದುವರೆಗೂ ಅರಣ್ಯ ಇಲಾಖೆಯವರು ಬೆಳೆ ನಾಶಗೊಂಡ ರೈತರಿಗೆ ಪರಿಹಾರವನ್ನು ನೀಡಿಲ್ಲ. ಆದ್ದರಿಂದ ಈ ಭಾಗದಲ್ಲಿರುವ ಅರಣ್ಯ ಪ್ರದೇಶವನ್ನು ಜಿಂಕೆಗಳ ಪ್ರದೇಶ ಎಂದು ಘೋಷಿಸಿ ಶಾಶ್ವತ ಪರಿಹಾರ ವ್ಯವಸ್ಥೆ ರೂಪಿಸಬೇಕಾದ ಅಗತ್ಯವಿದೆ.
ನೆರೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ:
ನೆರೆ ಬಂದ ಸಂದರ್ಭದಲ್ಲಿ ನಿರಾಶ್ರಿತರಿಗಾಗಿ ನಿರ್ಮಿಸಿದ ಮನೆಗಳು ಅನೇಕ ವರ್ಷದಿಂದ ಪಾಳು ಬಿದ್ದಿವೆ, ಇವುಗಳನ್ನು ಸರಿಪಡಿಸಿ ಮನೆ ಹಂಚಿಕೆ ಮಾಡುವವರೇ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ನಗರ ಮತ್ತು ಪಟ್ಟಣದ ಜನರಿಗೆ ನಿವೇಶನ  ಮತ್ತು ಮನೆ ಹಂಚಿಕೆ ಮಾಡುವುದು ಬಹುವರ್ಷದ ಬೇಡಿಕೆಯಾಗಿದೆ.
ಸಿರುಗುಪ್ಪ ನಗರವು ನಗರಸಭೆ ಮೇಲ್ದರ್ಜೆ ಪಡೆದ ನಂತರ ಸಮಸ್ಯೆಗಳಿಗೆ ಮುಕ್ತಿ ಇಲ್ಲವಾಗಿದೆ, ವಿವಿಧ ಕಛೇರಿಯಲ್ಲಿ ಹುದ್ದೆಗಳಿಗೆ ಅಧಿಕಾರಿಗಳ ಕೊರತೆ, ಧೂಳಿನ ನಗರವಾಗಿದೆ. ನಾಲೆಗಳಿಗೆ ಸಮಯಕ್ಕೆ ಸರಿಯಾಗಿ ನೀರು ಇಲ್ಲದೆ ಅಚ್ಚುಕಟ್ಟು ಭಾಗದ ರೈತರು ಪ್ರತಿವರ್ಷ ಬೆಳೆ ನಷ್ಟ ಅನುಭವಿಸುತ್ತಿದ್ದು ಇದನ್ನು ತಪ್ಪಿಸಿ ರೈತರ ಬೇಡಿಕೆಗೆ ತಕ್ಕಂತೆ ನೀರು ಹರಿಸುವ ಜವಾಬ್ದಾರಿ ಹೊರಬೇಕಾಗಿದೆ. ಈಗಿರುವ ಮಿನಿವಿಧಾನಸೌದ ಕಟ್ಟಡ ಬಿರುಕು ಬಿಟ್ಟಿದೆ. ಶ್ವಾಶತ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪನೆಯ ನಿರೀಕ್ಷೆ, ಗ್ರಾಮೀಣ ಭಾಗದ ಶಿಕ್ಷಕರ ವಸತಿ ಗೃಹ ಇಲ್ಲದಿರುವುದು, ಅಲ್ಲದೆ ತರಕಾರಿ ಮಾರುಕಟ್ಟೆಯಲ್ಲಿ ನಿರ್ಮಿಸಿದ ಕಟ್ಟಡಗಳು ಪಾಳು ಬಿದ್ದಿವೆ. ಐತಿಹಾಸಿಕ ಕೋಟೆ, ಸ್ಮಾರಕಗಳ ಅಭಿವೃದ್ಧಿ ಆಗಬೇಕಿದೆ. ಸರಕಾರದಿಂದ ಬರುವ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡುವ ಜೊತೆಗೆ ತಾಲೂಕಿಗೆ ವಿಶೇಷವಾದ ಯೋಜನೆಗಳನ್ನು ಜಾರಿಗೆ ತರುವುದು ಮಹತ್ವದ ಕೆಲಸವಾಗಿದೆ. ಇದನ್ನು ಕ್ಷೇತ್ರದ ಜನತೆಯ ನಿರೀಕ್ಷೆಯಾಗಿದೆ. ನೂತನ ಶಾಸಕ ಬಿ.ಎಂ.ನಾಗರಾಜ ಎಷ್ಟರ ಮಟ್ಟಿಗೆ ಸಾಕಾರಗೊಳಿಸುತ್ತಾರೋ ಕಾದು ನೋಡಬೇಕಿದೆ.
ಶಾಸಕರು ಕ್ಷೇತ್ರದ ಅಭಿವೃದ್ಧಿ ಜೊತೆಗೆ  ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕಿದೆ. ಸೌಲಭ್ಯಗಳಿಂದ ವಂಚಿತಗೊಂಡವರ ಬದುಕಿಗೆ ಸ್ಪಂದನೆ ಅವಶ್ಯಕವಾಗಿದೆ.
 ಸಿರುಗುಪ್ಪ ಕ್ಷೇತ್ರದಲ್ಲಿನ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವೆ. ಕ್ಷೇತ್ರದಲ್ಲಿನ ಸಮಸ್ಯೆ ಮತ್ತು ನೆನೆಗುದಿಗೆ ಬಿದ್ದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದು ಹಂತ-ಹಂತವಾಗಿ ಪರಿಹರಿಸಲು ಶ್ರಮಿಸುವೆ.
 ಬಿ.ಎಂ.ನಾಗರಾಜ, ಶಾಸಕರು, ಸಿರುಗುಪ್ಪ