ನೂತನ ಶಾಸಕರಿಗೆ ಕಾಂಗ್ರೆಸ್‍ನಲ್ಲಿ ಅಭಿನಂದನೆಯ ಸಂಭ್ರಮ

ಮೈಸೂರು: ಮೇ.22:- ಜಿಲ್ಲೆಯಿಂದ ಆಯ್ಕೆಗೊಂಡ ನೂತನ ಕಾಂಗ್ರೆಸ್‍ನ ಎಂಟು ಮಂದಿ ಶಾಸಕರು ಹಾಗೂ ಅವರ ಗೆಲುವಿಗೆ ಶ್ರಮಿಸಿದ ಪಕ್ಷದ ಪ್ರಮುಖರನ್ನು ಆತ್ಮೀಯವಾಗಿ ಸನ್ಮಾನಿಸುವ ಮೂಲಕ ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಭಾನುವಾರ ಸಂಭ್ರಮಿಸಿತು.
ನಗರದ ಕಚೇರಿ ಸನ್ಮಾನಕ್ಕೂ ಮೊದಲು ಮೆಟ್ರೋಪೆÇಲ್ ವೃತ್ತದಲ್ಲಿರುವ ಫಿಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ಥಳಿಗೆ ನೂತನ ಶಾಸಕರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅಲ್ಲಿಂದ ಮೆರವಣಿಗೆ ತೆರಳಿ ಪಕ್ಷ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೇರವೇರಿಸಿ ಸ್ಮರಣಾ ಕಾರ್ಯಕ್ರಮ ನೇರವೇರಿಸಿದರು. ಬಳಿಕ ಸನ್ಮಾನ ಸ್ವೀಕರಿಸಿದ ಶಾಸಕ ಕೆ.ಹರೀಶ್‍ಗೌಡ ಮಾತನಾಡಿ, ಚಾಮರಾಜದಲ್ಲಿ ಸತತ 5 ಬಾರಿ ಬಿಜೆಪಿ ವಿಜಯ ಸಾಧಿಸಿರುವ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್‍ಗೆ ಮರಳಿ ತರಲು ಶ್ರಮಿಸಿದ ಎಲ್ಲ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅಪಾರವಾಗಿ ಶ್ರಮಿಸಿದ್ದಾರೆ. ವಯೋವೃದ್ಧರಿಂದ ಪ್ರತಿಯೊಬ್ಬರ ಮನೆ, ಮನೆಗೆ ತೆರಳಿ ನನ್ನ ಪರವಾಗಿ ಮತಯಾಚಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು.
ಮುಂದೆ ನಗರಪಾಲಿಕೆ ಚುನಾವಣೆ ಬರುವುದರಿಂದ ನಮಗೆ ಹೆಚ್ವು ಜವಾಬ್ದಾರಿಯಿದ್ದು, ಜಿಲ್ಲಾಧ್ಯಕ್ಷರ ಮಾತಿಗೆ ಶಾಸಕರಾದ ನಾನೂ ಎಂದಿಗೂ ಧಿಕ್ಕರಿಸುವುದಿಲ್ಲ. ಯುವಕರು ತಮ್ಮ ನೋವನ್ನು ನಮಗೆ ಅರ್ಥೈಸಿದಾಗ ನಾನು ಖಂಡಿತ ನಿಮ್ಮ ನೋವಿಗೆ ಸ್ಪಂದಿಸುವೆ. ನನಗೆ ಇದುವರೆಗೆ ಯಾವುದೇ ಸಣ್ಣ ಅಧಿಕಾರ ಸಿಕ್ಕಿರಲಿಲ್ಲ. ಈಗ ದೊಡ್ಡ ಅಧಿಕಾರ ಸಿಕ್ಕಿದೆ ಕಾರ್ಯಕರ್ತರು, ಮತದಾರರು ನಮ್ಮನ್ನು ಸೂಕ್ತವಾಗಿ ಬಳಸಿಕೊಳ್ಳಿ ನಿಮ್ಮ ಎಲ್ಲಾ ಕೆಲಸಗಳನ್ನು ಯಾವುದೇ ಕಾರಣಕ್ಕೂ ನಾನು ವಿಳಂಬ ಮಾಡುವುದಿಲ್ಲ ಎಂದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಮೈಸೂರು ಭಾಗದಲ್ಲಿ ಯುವ ಶಾಸಕರಿದ್ದು, ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇವೆ. ನಮ್ಮ ತಂದೆ ಹಾಗೂ ನಾನೂ ಸೇರಿ ನಮ್ಮ ಕುಟುಂಬ ಕಾಂಗ್ರೆಸ್ ನೊಂದಿಗೆ 39 ವರ್ಷಗಳ ಬಾಂಧವ್ಯ ಹೊಂದಿದ್ದೇವೆ. ಕ್ಷೇತ್ರದಲ್ಲಿ ಒಮ್ಮೆ ಶಾಸಕರಾಗಿ ಆಯ್ಕೆಯಾದವರು ಇನ್ನೊಮ್ಮೆ ಆಯ್ಕೆಯಾಗುವುದಿಲ್ಲ ಎಂಬ ಮಾತನ್ನು ಕಾರ್ಯಕರ್ತರು ಹುಸಿಮಾಡಿದ್ದು, ಅವರಿಗೆ ನಾನು ಎಂದಿಗೂ ಋಣಿಯಾಗಿರುತ್ತೇನೆ ಎಂದು ತಿಳಿಸಿದರು.
ಶಾಸಕ ರವಿಶಂಕರ್ ಮಾತನಾಡಿ, ನಮ್ಮ 11 ಜನರ ಭವಿಷ್ಯ ಕಾರ್ಯಕರ್ತರಲ್ಲಿತ್ತು. ಕ್ಷೇತ್ರದ ಸಾಕಷ್ಟು ಜನರಿಗೆ ನಮ್ಮ ಪರಿಚಯವೇ ಇರಲಿಲ್ಲ. ಕಾರ್ಯಕರ್ತರು ಅವರೇ ಅಭ್ಯರ್ಥಿಗಳಂತೆ ನಮ್ಮ ಗೆಲುವಿಗೆ ಶ್ರಮಿಸಿದ್ದಾರೆ. ಮೈಸೂರು ಹಾಗೂ ಚಾಮರಾಜನಗರ ಸೇರಿ 15 ಕ್ಷೇತ್ರದಲ್ಲಿ 11 ಸ್ಥಾನವನ್ನು ಗೆಲ್ಲಲು ಸಹಕರಿಸಿದ್ದಾರೆ ಅವರ ಸೇವೆಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಸುಮಾರು 86 ಜನ ಪಕ್ಷದಿಂದ ವೀಕ್ಷಕರನ್ನು ಗುಪ್ತವಾಗಿ ನೇಮಿಸಿತ್ತು. ಅವರು 20 ದಿನಗಳ ಕಾಲ ಗೌಪ್ಯವಾಗಿ ನಿಮಗೆ ಗೊತ್ತಿಲ್ಲದೆ ಕೆಲಸ ಮಾಡಿದ್ದಾರೆ ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಶಾಸಕ ದರ್ಶನ್ ದ್ರುವನಾರಾಯಣ್ ಮಾತನಾಡಿ, ಈ ಚುನಾವಣೆಯೂ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲಾಗಿತ್ತು. ಬಿಜೆಪಿ ಕೇಂದ್ರ, ರಾಜ್ಯದಲ್ಲಿ ಅಧಿಕಾರದಲ್ಲಿದ್ದರಿಂದ ಚುನಾವಣೆ ಗೆಲ್ಲಲು ಹಲವು ತಂತ್ರಗಳನ್ನು ರೂಪಿಸಿದ್ದರೂ ಸಹ ಕಾಂಗ್ರೆಸ್ ಆ ಸವಾಲನ್ನು ಹಿಮ್ಮೆಟ್ಟಿಸಿ, ನಮ್ಮ ಕಾರ್ಯಕರ್ತರು ನಮ್ಮನ್ನು ಗೆಲ್ಲಿಸುವುದರ ಜತೆ ಪಕ್ಷ ಸಂಘಟಿಸಿದ್ದಾರೆ ಎಂದು ತಿಳಿಸಿದರು. ವಿಧಾನಪರಿಷತ್ ಸದಸ್ಯ ಡಾ.ಡಿ ತಿಮ್ಮಯ್ಯ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಅಧ್ಯಕ್ಷ ಮರಿಗೌಡ, ಡಿಸಿಸಿ ಸದಸ್ಯ ಶಿವಣ್ಣ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಸುಶೀಲಕೇಶವ ಮೂರ್ತಿ, ಲತಾ ಶೆಟ್ಟಿ, ನಗರಾಧ್ಯಕ್ಷ ಆರ್.ಮೂರ್ತಿ ಸೇರಿ ಅನೇಕರು ಉಪಸ್ಥಿತರಿದ್ದರು.