
ಸಂಜೆವಾಣಿ ಪ್ರತಿನಿಧಿಯಿಂದ
ವಿಜಯನಗರ(ಹೊಸಪೇಟೆ), ಮೇ.09: ನೂತನ ವಿಜಯನಗರ ಜಿಲ್ಲೆಯ ಪ್ರಥಮ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಶೇ.91.41ರಷ್ಟು ಸಾಧನೆಯ ಮೂಲಕ ಜಿಲ್ಲೆ 10 ಸ್ಥಾನವನ್ನು ಪಡೆಯುವ ಮೂಲಕ ಹೆಮ್ಮೆಗೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಶೇ.86ರಷ್ಟು ಫಲಿತಾಂಶ ಪಡೆದು, 14ನೇ ಸ್ಥಾನದಲ್ಲಿದ್ದ ಅಖಂಡ ಬಳ್ಳಾರಿ ಜಿಲ್ಲೆಯಿಂದ ಪ್ರತೇಕಗೊಂಡ ವಿಜಯನಗರ ಪ್ರಥಮ ಬಾರಿಯೇ 10ನೇ ಸ್ಥಾನವನ್ನು ಪಡೆದಿದೆ. ಇದಕ್ಕೆ ಈ ಬಾರಿ ವಿಶೇಷ ತರಗತಿ, ಶಿಕ್ಷಕರು, ಮುಖ್ಯಶಿಕ್ಷಕರಿಗೆ ವಿಶೇಷ ತರಬೇತಿ, ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಪಾಠ, ಬೋಧನೆ ಮಾಡಿರುವುದು ಹಾಗೂ ಗುರುವೃಂದದ ಸಂಘಟಿತ ಶ್ರಮ ಸಾಧನೆಗೆ ಕಾರಣ ಎಂದರು.
ಫಲಿತಾಂಶದ ವಿವಿರ:
ಈ ಬಾರಿ ಒಟ್ಟು 19588 ವಿದ್ಯಾರ್ಥಿಗಳು ಪೈಕಿ 9686 ವಿದ್ಯಾರ್ಥಿಗಳು ಹಾಗೂ 9902 ವಿದ್ಯಾರ್ಥಿನಿಯರು ಪರೀಕ್ಷೆ ಬರೆದು 8732 ವಿದ್ಯಾರ್ಥಿಗಳು ಮತ್ತು 9174 ವಿದ್ಯಾರ್ಥಿನಿಯರು ತೇರ್ಗಡೆಗೊಳ್ಳುವ ಮೂಲಕ ಶೇಕಡಾ 91.41 ಪತ್ರಿಶತ ಫಲಿತಾಂಶಕ್ಕೆ ಕಾರಣವಾಗಿದ್ದು ಈ ಪೈಕಿ ಗ್ರಾಮೀಣ ಪ್ರದೇಶ ಹಾಗೂ ವಿದ್ಯಾರ್ಥಿನಿಯರೇ ತಮ್ಮ ಪಾರುಪತ್ಯ ಮೆರೆದಿದ್ದಾರೆ.
ಹೂವಿನಹಡಗಲಿಯ ಎಂ.ಎಂ. ಪಾಟೀಲ್ ಆಂಗ್ಲಮಾಧ್ಯಮ ಶಾಲೆಯ ಬಾಲಕಿ ಮೇಘನಾ ಪಿ. ತೋಟಗೇರಿ ಹಾಗು ಕೊಟ್ಟೂರಿನ ಗುರುದೇವ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಿಂಧು ಎಂ. 625ಕ್ಕೆ 621 ಅಂಕಗಳನ್ನು ಗಳಿಸಿ ವಿಜಯನಗರ ಜಿಲ್ಲೆಗೆ ಮೊದಲ ಸ್ಥಾನಗಳಿಸಿದ್ದಾರೆ.
ಹೊಸಪೇಟೆಯ ತಿಮ್ಮಲಾಪುರದ ಮೊರಾರ್ಜಿ ದೇಸಾಯಿ ಶಾಲೆಯ ಮನೋಜ್ ಎಲ್., ಹೂವಿನಹಡಗಲಿಯ ಎಂ.ಎಂ. ಪಾಟೀಲ್ ಆಂಗ್ಲಮಾಧ್ಯಮ ಶಾಲೆಯ ಚಿನ್ಮಯಿ ಜಿ., ಕೊಟ್ಟೂರಿನ ಶ್ರೀಮಹಾದೇವ ಆಂಗ್ಲಮಾಧ್ಯಮ ಶಾಲೆಯ ಅರುಣ್‍ಕುಮಾರ ಗುತ್ತೂರು 625ಕ್ಕೆ 620 ಅಂಕಗಳನ್ನು ಗಳಿಸಿ ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದ್ದಾರೆ.
ಕೊಟ್ಟೂರಿನ ಗುರುದೇವ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸೃಷ್ಟಿ ಕೆ. ಮತ್ತು ಸೃಷ್ಟಿ ಕೆ.ಎಸ್. 625ಕ್ಕೆ 619 ಅಂಕಗಳನ್ನು ಗಳಿಸಿ ಜಿಲ್ಲೆಗೆ ಮೂರನೇ ಸ್ಥಾನಗಳನ್ನು ಸಮವಾಗಿ ಹಂಚಿಕೊಂಡಿದ್ದಾರೆ. ಎಂದಿನಂತೆ ಸರ್ಕಾರಿ, ಅನುದಾನಿತ ಶಾಲೆಗಳಿಗಿಂತಲೂ ಖಾಸಗಿ ಶಾಲೆಗಳು ಉತ್ತಮ ಫಲಿತಾಂಶವನ್ನು ಪಡೆಯುವ ಮೂಲಕ ತನ್ನ ಸಾಧನೆಯ ಪರಿಯನ್ನು ಮುಂದುವರೆಸಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪೊಲೀಸವರಿಷ್ಠಾಧಿಕಾರಿ ಶ್ರೀಹರಿಬಾಬು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ,ಕೊಟ್ರೇಶ್ ಗೋಷ್ಠಿಯಲ್ಲಿದ್ದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್‍ರವರು ಸೇರಿದಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಂದ ದೊರೆತ ಮಾರ್ಗದರ್ಶನ, ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ದೊರೆತ ವಿಶೇಷ ತರಬೇತಿ. ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿದ್ದರ ಫಲ, ವಿಜಯನಗರ ಜಿಲ್ಲೆ ಅಗ್ರ ಹತ್ತನೇ ಸ್ಥಾನ ಪಡೆದಿದೆ. ಮೊದಲಬಾರಿ ಪ್ರತೇಕ ಜಿಲ್ಲೆಯಾದನಂತರ ದೊರೆತ ಫಲ ಖುಷಿ ನೀಡಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಗೆ ಪ್ರೇರಣೆಯಾಗಿದೆ.
ಜಿ. ಕೊಟ್ರೇಶ್, ಉಪನಿರ್ದೇಶಕರು ವಿಜಯನಗರ.
One attachment • Scanned by Gmail