ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಪ್ರತಿಭಟನೆ

ಕಲಬುರಗಿ,ಜು.29: ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಷ್ಟ್ರ ಸಮಿತಿಯು ಎನ್‍ಇಪಿ-2020′ ವಿರೋಧಿಸಿ ಕರೆ ನೀಡಿದ್ದ “ಅಖಿಲ ಭಾರತ ಪ್ರತಿಭಟನಾ ದಿನ” ಹೋರಾಟವನ್ನು ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಪ್ರತಿಭಟನೆ ಮಾಡಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಎಸ್. ಇಬ್ರಾಹಿಂಪುರ ಅವರು ಮಾತನಾಡಿ, ಎನ್‍ಇಪಿ-2020 ನೀತಿಯ ಶ್ರೇಷ್ಠತೆ, ಶಿಕ್ಷಣದಲ್ಲಿ ಐತಿಹಾಸಿಕ ಕ್ರಾಂತಿ ಎಂಬಂತೆ ಹೆಣೆದ ಸುಳ್ಳಿನ ದಂತಕತೆಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಆದರೆ ಸಂಕಟದ ಹಾಗೂ ಚಿಂತೆಯ ವಿಷಯವೆಂದರೆ ಆಳ್ವಿಕರ ಬೇಜವಬ್ದಾರಿತನ ಹಾಗೂ ಕಾರ್ಪೊರೇಟ್ ಮನೆತನಗಳ ಸೇವೆಗಾಗಿ ಭವಿಷ್ಯದ ಭಾರತವನ್ನು ಕಟ್ಟಬೇಕಾದ ವಿದ್ಯಾರ್ಥಿಗಳನ್ನು ಬಲಿಪಶುಗಳನ್ನಾಗಿ ಮಾಡುತ್ತಿರುವುದನ್ನು ಖಂಡಿಸಿದರು.
ಶಿಕ್ಷಣದ ಯಾವುದೇ ನೀತಿಯು ಮೂಲಭೂತವಾಗಿ ಎಲ್ಲರಿಗೂ ಶಿಕ್ಷಣವು ದೊರಕಿಸುವ ಉದ್ದೇಶ ಹೊಂದಿರÀಬೇಕು. ಆದರೆ ಈಗಾಗಲೇ ಬಂದಿರುವ ಮತ್ತು ಬರುತ್ತಿರುವ ಶಿಕ್ಷಣ ನೀತಿಗಳು ದೇಶದ ಬಹುಸಂಖ್ಯಾತ ಜನಗಳಿಗೆ ಶಿಕ್ಷಣದ ಬಾಗಿಲುಗಳು ಮುಚ್ಚುವ ನೀತಿಗಳಾಗಿವೆ. ಎನ್.ಇ.ಪಿ-2020ರ ಶಬ್ದಾಡಂಭರದ ಡಾಕ್ಯುಮೆಂಟ್ ಓದಿದಾಗ ಹಲವು ವೈರುದ್ಯಗಳಿಂದ ಕೂಡಿರುವುದು ಕಾಣುತ್ತದೆ. ‘ದೇಶದಲ್ಲಿಯೇ ನಾವೇ ಮೊದಲು’ ಎಂಬ ಹುಸಿ ಹೆಗ್ಗಳಿಕೆಗೆ ಹಾಗೂ ಕೇಂದ್ರ ಸರ್ಕಾರದ ನೇತಾರರನ್ನು ಮೆಚ್ಚಿಸುವುದಕ್ಕಾಗಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಯಾವುದೇ ಚರ್ಚೆ, ಸಂವಾದಗಳನ್ನು ಮಾಡದೇ, ಅನುಷ್ಠಾನದ ರೂಪುರೇಶೆಗಳನ್ನು ರೂಪಿಸದೇ ಮತ್ತು ಪೂರ್ವ ತಯಾರಿಯಿಲ್ಲದೇ ಕೋವಿಡ್ ಸಂಕಷ್ಟ ಕಾಲದಲ್ಲಿ ಏಕಾಏಕಿ ರಾಜ್ಯದ ಉನ್ನತ ಶಿಕ್ಷಣದ ಮೇಲೆ ಎನ್‍ಇಪಿ-2020 ಹೇರಿದರು ಎಂದು ಅವರು ಆರೋಪಿಸಿದರು.
ಈ ಹಠಾತ್ ಹೇರಿಕೆಯಿಂದ ಆಗಿರುವ ಹಾಗೂ ಇನ್ನೂ ಆಗುತ್ತಲಿರುವ ತೊಂದರೆಗಳು, ಗೊಂದಲಗಳು ಒಂದೆರಡಲ್ಲ. ಇಡೀ ಉನ್ನತ ಶಿಕ್ಷಣವನ್ನು ಅರಾಜಕ ಸ್ಥಿತಿಗೆ ದೂಡಿದ್ದಾರೆ. ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಗಾಳಿಗೆ ತೂರಿ, ಹೇಗಾದರೂ ಮಾಡಿ ಎನ್‍ಇಪಿ.-2020 ಅನ್ನು ಜಾರಿಗೊಳಿಸುವಂತೆ ಒತ್ತಾಯಿಸಲಾಗಿದೆ. ಇಲ್ಲಿಯವರೆಗೂ ಕೂಡಾ ಪದವಿ ಹಾಗೂ ಸ್ನಾತಕೊತ್ತರ ಶಿಕ್ಷಣದಲ್ಲಿ ಎದ್ದಿರುವ ಪ್ರಶ್ನೆಗಳು, ಗೊಂದಲಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಅರೆಬರೆಯಾಗಿ ಅನುಷ್ಠಾನ ಮಾಡಿದ್ದರಿಂದ ಇಲ್ಲಿಯವರೆಗೂ ಪದವಿಯ/ಸ್ನಾಕೋತ್ತರ ಪರೀಕ್ಷೆಗಳು ಸರಿಯಾಗಿ ನಡೆಸಲು ಸಾಧ್ಯವಾಗಿಲ್ಲದಿರುವುದು ನೋಡಿದರೆ ಈ ನೀತಿಯು ಎಷ್ಟೊಂದು ಅವ್ಯವಸ್ಥೆಯಿಂದ ಕೂಡಿದೆ ಎಂಬುದು ಗೊತ್ತಾಗುತ್ತದೆ. ಹಲವು ಆಯಾಮಗಳಿಂದ ಈ ನೀತಿಯು ಅಪ್ರಜಾಸತ್ತಾತ್ಮಕ, ಅವೈಜ್ಞಾನಿಕ, ಶಿಕ್ಷಣವಿರೋಧಿ, ವಿದ್ಯಾರ್ಥಿ ವಿರೋಧಿ ಹಾಗೂ ಶಿಕ್ಷಕ ವಿರೋಧಿ ನೀತಿಯಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಎಐಎಸ್‍ಇಸಿ ಜಿಲ್ಲಾ ಮುಖಂಡರಾದ ಶ್ರೀಮತಿ ಅಶ್ವಿನಿಯವರು ಮಾತನಾಡಿ, ಎನ್‍ಇಪಿ-2020 ನೀತಿಯು ಶಿಕ್ಷಣ ವಿರೋಧಿ, ವಿದ್ಯಾರ್ಥಿ ವಿರೋಧಿಯಾದ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು ಜುಲೈ 29 2020ರಂದು. ಈ ದಿನವೇ ಭಾರತ ಕಂಡ ಮೇಧಾವಿ, ಕರುಣಾಮಯಿ, ಆಧುನಿಕ ಶಿಕ್ಷಣದ ನೇತಾರ ‘ಈಶ್ವರಚಂದ್ರ ವಿದ್ಯಾಸಾಗರ್ ಅÀವರ ಮರಣ ದಿನ. ಅವರು ದೇಶದ ಎಲ್ಲಾ ಮಕ್ಕಳಿಗೆ ವೈಜ್ಞಾನಿಕ, ಧರ್ಮನಿರಪೇಕ್ಷವಾದ ಶಿಕ್ಷಣಕ್ಕಾಗಿ, ಮಹಿಳೆಯರ ಶಿಕ್ಷಣಕ್ಕಾಗಿ ಹಗಲಿರುಳು ಕೊನೆಯುಸಿರು ತನಕ ಅವಿರತವಾಗಿ ಶ್ರಮಿಸಿದ ಮಹಾನ್ ಮಾನವತಾವಾದಿ. ಈ ರೀತಿಯ ಶಿಕ್ಷಣ ನೀತಿಗಳು ಅಂತಹ ಮಹಾನ್ ಚೇತನಗಳಿಗೆ ಅಪಚಾರ ಎಸಗಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್‍ಇಪಿ-2020ರ ಭಾಗವಾಗಿಯೇ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆಯ ನೆಪದಲ್ಲಿ ರಾಜ್ಯ ಸರ್ಕಾರವು ಸತ್ಯಗಳನ್ನು ತಿರುಚಿ, ಪ್ರಗತಿವಿರೋಧಿ ಚಿಂತನೆಯನ್ನು ಪಠ್ಯಪುಸ್ತಕದ ಮೂಲಕ ಪ್ರಚಾರ ಮಾಡಲು ಪ್ರಯತ್ನಿಸುತ್ತಿದೆ. ಮಕ್ಕಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಯನ್ನು ಕುಂಠಿತಗೊಳಿಸಿ ಕೋಮುದ್ವೇಷದ ವಿಷಬೀಜಗಳನ್ನು ಬಿತ್ತಲು ಫಲವತ್ತಾದ ನೆಲವನ್ನು ನಿರ್ಮಿಸಿ ಏಕತೆ ಮತ್ತು ಕೋಮು ಸೌಹಾರ್ದತೆಯನ್ನು ಹಾಳು ಮಾಡುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಕಿಡಿಕಾರಿದರು.
ಇತಿಹಾಸ ಮತ್ತು ಶಿಕ್ಷಣವನ್ನು ಪಕ್ಷಗಳ ಮತ್ತು ಸರ್ಕಾರಗಳ ಸಿದ್ಧಾಂತಗಳಿಗೆ ತಕ್ಕಂತೆ ತಿರುಚುವುದು ನಾಗರಿಕತೆಯ ವಿರುದ್ಧ ನಡೆಸುವ ಅಪರಾಧವಲ್ಲದೆ ಇನ್ನೇನೂ ಅಲ್ಲ. ಆದರೆ ಇದಕ್ಕೆ ನಾಡಿನ ಜನಗಳಿಂದ ಬಂದಂತಹ ಪ್ರತಿರೋಧ ಅವಿಸ್ಮರಣೀಯ. ಜನತೆಯ ಆಕ್ರೋಶದ ಹೋರಾಟಕ್ಕೆ ಸರ್ಕಾರವು ಮಣಿಯಬೇಕಾಯಿತು. ಇನ್ನೂ ಉನ್ನತ ಹಂತದ ಹೋರಾಟವು ನಮ್ಮೇಲರ ಮೇಲಿದೆ ಎಂದು ಅವರು ಹೇಳಿದರು. ಪ್ರತಿಭಟನೆಯಲ್ಲಿ ಎಐಎಸ್‍ಇಸಿ ಜಿಲ್ಲಾ ಸಮಿತಿಯ ಸದಸ್ಯರಾದ ವಿಶಾಲಾಕ್ಷಿ ಪಾಟೀಲ್, ಜಾನಕಿ ಎಸ್. ಗುದ್ದಿ, ಶಿವುಕುಮಾರ್ ಕುಸಾಳೆ, ಶ್ರೀಮತಿ ವಿಜಯಾ ಮುಂತಾದವರು ಪಾಲ್ಗೊಂಡಿದ್ದರು.