ನೂತನ ರಾಷ್ಟ್ರಪತಿ ಆಯ್ಕೆ: ಬಿಜೆಪಿ ವಿಜಯೋತ್ಸವ

ತುಮಕೂರು, ಜು. ೨೨- ಭಾರತದ ೧೫ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮ ಅವರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಅವರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು.
ಚುನಾವಣೆ ಫಲಿತಾಂಶ ಘೋಷಣೆಯಾದ ಬೆನ್ನಲ್ಲೆ ಬಿಜೆಪಿ ಕಾರ್ಯಕರ್ತರು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರ ಭಾವಚಿತ್ರದೊಂದಿಗೆ ನಗರದ ಬಿ.ಜಿ.ಎಸ್ ವೃತ್ತದಲ್ಲಿ ಸಮಾವೇಶಗೊಂಡು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಕ, ದೇಶದ ೧೫ನೇ ರಾಷ್ಟ್ರಪತಿಯಾಗಿ ಆದಿವಾಸಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರನ್ನು ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಕಣಕ್ಕೆ ಇಳಿಸಿತ್ತು. ಅವರು ಇಂದು ಅಭೂತ ಪೂರ್ವ ವಿಜಯವನ್ನು ಸಾಧಿಸಿದ್ದಾರೆ. ಇದು ಬಿಜೆಪಿ ಸೇರಿದಂತೆ ರಾಷ್ಟ್ರದ ಎಲ್ಲ ಜನರು ಸಂಭ್ರವಿಸುವಂತಹ ವಿಷಯವಾಗಿದೆ ಎಂದರು.
ಒಡಿಸಾ ರಾಜ್ಯದ ಸಚಿವರಾಗಿ, ಜಾರ್ಖಾಂಡನ ರಾಜ್ಯಪಾಲರಾಗಿ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ದ್ರೌಪ್ರದಿ ಮುರ್ಮ ಅವರ ಆಯ್ಕೆಗೆ ಸಹಕರಿಸಿದ ಎಲ್ಲಾ ಸಂಸದರಿಗೂ, ಶಾಸಕರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮ ಆಯ್ಕೆಯಾಗುವ ಮೂಲಕ ಮಹಿಳಾ ಶಕ್ತಿಯ ಅನಾವರಣಾಗೊಳಿಸಿದ್ದಾರೆ ಎಂದರು.
ವಿಜಯೋತ್ಸವದಲ್ಲಿ ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್. ನಾಗಣ್ಣ, ಜಿಲ್ಲಾ ಉಪಾಧ್ಯಕ್ಷ ನಾಗರತ್ನಮ್ಮ, ಜಿಲ್ಲಾ ಕಾರ್ಯದರ್ಶಿ ಸಂದೀಪಗೌಡ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ನಗರ ಮಂಡಲ ಅಧ್ಯಕ್ಷ ಟಿ.ಹೆಚ್. ಹನುಮಂತರಾಜು, ವಕ್ತಾರ ಕೆ.ಪಿ.ಮಹೇಶ್, ಪಾಲಿಕೆ ಸದಸ್ಯರಾದ ರಮೇಶ್, ಮಲ್ಲಿಕಾರ್ಜುನ್, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್,ಎಸ್ಟಿ ಮೋರ್ಚಾದ ಬಂಬೂ ಮೋಹನ್, ಹಿಂದುಳಿದ ಮೋರ್ಚಾದ ವೇದಮೂರ್ತಿ, ಟೂಡಾ ಮಾಜಿ ಸದಸ್ಯ ಪ್ರತಾಪ ಮತ್ತಿತರರು ಪಾಲ್ಗೊಂಡಿದ್ದರು.