ನೂತನ ಬಸ್ ನಿಲ್ದಾಣಕ್ಕೆ ಶೀಘ್ರದಲ್ಲೇ ಚಾಲನೆ: ರಾಚಪ್ಪ


ಸಂಜೆವಾಣಿ ವಾರ್ತೆ:
ಕೊಟ್ಟೂರು, ಜು.15: ಬಸ್ ನಿಲ್ದಾಣ ಕಟ್ಟಡವನ್ನು ತೆರವುಗೊಳಿಸಿ ಇರುವ ಸ್ಥಳದಲ್ಲಿಯೇ ಸುಸಜ್ಜಿತ ಕಟ್ಟಡವನ್ನು  ನಿರ್ಮಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಶಾಸಕರ 2 ಕೋಟಿ ಅನುದಾನದಡಿ ಇರುವ ಕಟ್ಟಡವನ್ನು ತೆರವುಗೊಳಿಸಿ ಆಧುನಿಕ ರೀತಿಯಲ್ಲಿ ನಿರ್ಮಿಸಲು ಮುಂದಾಗುವುದಾಗಿ ಎಂದು ತಿಳಿಸಿದರು.
ಪಟ್ಟಣಕ್ಕೆ ಸಮೀಪದಲ್ಲಿ  ಸರ್ಕಾರದ  ಸ್ಥಳ ದೊರಕಿದಲ್ಲಿ ಡಿಪೋ ಸಹ ಆರಂಭ ಮಾಡಲಾಗುವುದು ಎಂಬ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ  ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಹಾಗೂ ನಿಗದಿತ ಸಮಯಕ್ಕೆ ಬಿಡುವಂತೆ ಸಾರ್ವಜನಿಕರು ಒತ್ತಾಯಿಸಿದಾಗ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹರಿಸಬೇಕೆಂದು ತಾಕೀತು ಮಾಡಿದರು. 
ಅಲ್ಪ ಸ್ವಲ್ಪ ಮಳೆಯಾದರೂ ಸಾಕು ನಿಲ್ದಾಣ ಮಳೆ ನೀರು ಹಾಗೂ ತ್ಯಾಜ್ಯದಿಂದ ಆವರಿಸಿ ಪ್ರಯಾಣಿಕರಿಗೆ ಅನಾನುಕೂಲವಾಗುವುದನ್ನು ಪ್ರಶ್ನಿಸಿದಾಗ  ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿರುವುದರಿಂದ ಪರಿಹರಿಸಲು ತಾವೇ ಖುದ್ಧಾಗಿ ಬಂದಿದ್ದು ನಿಲ್ದಾಣಕ್ಕಿಂತ ಮುಂದಿನ ರಸ್ತೆ ಎತ್ತರದಲ್ಲಿರುವುರಿಂದ  ನಿಲ್ದಾಣಕ್ಕೆ ನೀರು ಬರುವುದು ಸಹಜವಾಗಿದೆ ಎಂದ ಅವರು ಇದರ ಶಾಶ್ವತ ಪರಿಹಾರಕ್ಕಾಗಿ ಬೇಗನೇ ನಿಲ್ದಾಣದ ಕಾಮಗಾರಿಗೆ ಚಾಲನೇ ನೀಡಲಾಗುವುದು ಎಂದರು.
ವಿಜಯನಗರ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಕೊಟ್ರಪ್ಪ, ಸಂಚಾರ ನಿಯಂತ್ರಣಾಧಿಕಾರಿ ಕೆ.ಬಸವರಾಜಪ್ಪ, ಹಾಗೂ ಜಹಂಗೀರ್,ಚಂದ್ರಪ್ಪ  ಮುಂತಾದ ಅಧಿಕಾರಿಗಳು, ಮುಖಂಡರು ಇದ್ದರು.