ನೂತನ ಪೊಲೀಸ್ ಕಮಿಷನರ್ ಶಶಿಕುಮಾರ್ ಅಧಿಕಾರ ಸ್ವೀಕಾರ


ಮಂಗಳೂರು, ಜ.೨- ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿರುವ ವಿಕಾಸ್ ಕುಮಾರ್ ಅವರನ್ನು ವರ್ಗಾಯಿಸಲಾಗಿದ್ದು, ನೂತನ ಕಮಿಷನರ್ ಆಗಿ ಬೆಂಗಳೂರಿನ ಶಶಿಕುಮಾರ್ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಮಾಡಿದೆ.
ಎನ್.ಶಶಿಕುಮಾರ್ ಅವರು ಚಿತ್ರದುರ್ಗ ಮೂಲದವರಾಗಿದ್ದು, ೨೦೦೭ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಬಿಎಸ್ಸಿ ಕೃಷಿ ಪದವೀಧರರಾದ ಇವರು ಈ ಹಿಂದೆ ಬೆಂಗಳೂರು ಉತ್ತರ ಡಿಸಿಪಿ ಆಗಿ, ವೈರ್‌ಲೆಸ್ ವಿಭಾಗದ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ವಿಕಾಸ್ ಕುಮಾರ್ ೨೦೨೦ರ ಜೂ.೨೯ರಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದು, ೬ ತಿಂಗಳಲ್ಲೇ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಡಿಐಜಿ ಆಗಿ ವರ್ಗಾಯಿಸಲಾಗಿದೆ.
ಡಿಸಿಪಿ ಹರಿರಾಮ್ ಶಂಕರ್: ಕುಂದಾಪುರ ಉಪವಿಭಾಗದ ಎಎಸ್ಪಿಯಾಗಿದ್ದ ಹರಿರಾಮ್ ಶಂಕರ್ ಅವರನ್ನು ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತರಾಗಿ ನಿಯುಕ್ತಿಗೊಳಿಸಲಾಗಿದೆ. ಮಂಗಳೂರು ನಗರ ಡಿಸಿಪಿಯಾಗಿದ್ದ ಅರುಣಾಂಶುಗಿರಿ ಅವರ ವರ್ಗಾವಣೆ ಬಳಿಕ ಹರಿರಾಮ್ ಶಂಕರ್ ಪ್ರಭಾರ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಆಗಿದ್ದ ಐಪಿಎಸ್ ಅಧಿಕಾರಿ ರಂಜಿತ್ ಕುಮಾರ್ ಬಂದಾರು ಅವರನ್ನು ಭಟ್ಕಳ ಉಪವಿಭಾಗದ ಎಎಸ್ಪಿ ಆಗಿ ನಿಯುಕ್ತಿಗೊಳಿಸಲಾಗಿದೆ.