ನೂತನ ಪರಿಷತ್ ಸದಸ್ಯರ ಪ್ರಮಾಣ ವಚನ

(ಸಂಜೆವಾಣಿ ಪ್ರತಿನಿಧಿಯಿಂದ)
ವಿಧಾನಸೌಧದಲ್ಲಿಂದು ನೂತನ ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ನಟಿ ಉಮಾಶ್ರೀ, ಎಂ.ಆರ್.ಸೀತಾರಾಂ ಹಾಗೂ ಹೆಚ್.ಪಿ. ಸುಧಾಮ್‌ದಾಸ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಹೆಚ್.ಕೆ. ಪಾಟೀಲ್, ಎನ್.ಎಸ್. ಬೋಸರಾಜು, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತಿತರರು ಇದ್ದಾರೆ.
ಬೆಂಗಳೂರು,ಆ.೩೧:ವಿಧಾನ ಪರಿಷತ್‌ಗೆ ನೂತನವಾಗಿ ನಾಮಕರಣಗೊಂಡಿರುವ ಮೂವರು ಸದಸ್ಯರುಗಳ ಪ್ರಮಾಣವಚನ ಕಾರ್ಯಕ್ರಮ ಇಂದು ನಡೆಯಿತು. ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡಿರುವ ಎಂ.ಆರ್ ಸೀತಾರಾಮ್, ಉಮಾಶ್ರೀ ಮತ್ತು ಸುಧಾಮ್‌ದಾಸ್ ಇವರುಗಳು ಇಂದು ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಹೆಚ್.ಕೆ ಪಾಟೀಲ್, ಬೋಸರಾಜು, ಪರಿಷತ್‌ನ ಸರ್ಕಾರಿ ಮುಖ್ಯಸಚೇತಕ ಸಲೀಂ ಅಹ್ಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.