ಜಾತಿ ಗಣತಿ ಮರು ಸಮೀಕ್ಷೆಗೆ ಬಿಎಸ್‌ವೈ ಆಗ್ರಹ

(ಸಂಜೆವಾಣಿ ವಾರ್ತೆ)
ದಾವಣಗೆರೆ. ಡಿ.೨೪; ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಂದಾಲೋಚನೆಯಿಂದಲೇ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ನೂತನ ಅಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರು ಪ್ರಧಾನಿ ಮೋದಿ, ಅಮಿತ್ ಷಾ ಹಾಗೂ ರಾಷ್ಟ್ರಾಧ್ಯಕ್ಷರಾದ ಜೆ.ಪಿ ನಡ್ಡಾ ಜೊತೆ ಮಾತನಾಡಿ ಚರ್ಚೆ ನಡೆಸಿಯೇ ಪಟ್ಟಿ ಬಿಡುಗಡೆ ಮಾಡಿದ್ದಾರೆ.ನಿರೀಕ್ಷೆಯಂತೆ ಹೊಸಬರಿಗೆ ಹೆಚ್ಚು ಅವಕಾಶ ನೀಡಲಾಗಿದೆ.ಅವರೆಲ್ಲರ ಶಕ್ತಿ ಉಪಯೋಗ ಮಾಡಿಕೊಂಡು ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.ಮುಂದಿನ ನಮ್ಮ ಗುರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಾಗಿದೆ ಆದ್ದರಿಂದ ಎಲ್ಲರನ್ನೂ ಭೇಟಿಯಾಗಿ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದೇನೆ ಎಂದರು.
ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಯುವಕರಲ್ಲಿ ಉತ್ಸಾಹ ಹೆಚ್ಚಾಗಿದೆ ಅಲ್ಲದೇ ರಾಜ್ಯದಲ್ಲಿ ವಾತಾವರಣ ನಿರೀಕ್ಷೆ ಮೀರಿ ನಮ್ಮ ಪರವಾಗಿದೆ.ಯವಕರ ಉತ್ಸಾಹ ಲೋಕಸಭಾ ಚುನಾವಣೆಗೆ ಫ್ಲಸ್ ಆಗಲಿದೆ. ಪ್ರಧಾನಿ ಮೋದಿ ಆಡಳಿತ ಜಗತ್ತೇ ಮೆಚ್ಚಿದೆ. ಆದ್ದರಿಂದ ಈ ಬಾರಿ ನಮ್ಮ ಗೆಲುವು ನಿಶ್ಚಿತ ಎಂದರು
ಹಿಜಾಬ್ ಆದೇಶದ ಬಗ್ಗೆ ಮಾತನಾಡಿರುವ ಸಿಎಂ ನಮ್ಮೆಲ್ಲರ ಒತ್ತಾಯಕ್ಕೆ ಮಣಿದು ತಮ್ಮ ಹೇಳಿಕೆ ಹಿಂಪಡೆದಿದ್ದಾರೆ.ಈಗಲಾದರೂ ಅವರಿಗೆ ಸದ್ಬುದ್ದಿ ಬರಲಿ.ನಾವು ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಜಾತಿ ವಿಷಬೀಜ ಬಿತ್ತುವ ಕೆಲಸವನ್ನು ಸಿಎಂ ನಿಲ್ಲಿಸಬೇಕು. ಇದರಿಂದ ಯಾವ ಲಾಭ ಆಗುವುದಿಲ್ಲ ಎಂದರು.
ವೀರಶೈವ ಲಿಂಗಾಯತ ಸಮುದಾಯದ ಜಾತಿಗಣತಿ ಸರಿಯಾಗಿ ನಡೆದಿಲ್ಲ.ಸಮೀಕ್ಷೆ ಸರಿಯಾಗಿಲ್ಲ.ಆದ್ದರಿಂದ ಮತ್ತೊಮ್ಮೆ ವಾಸ್ತವಾಂಶವುಳ್ಳ ಸಮೀಕ್ಷೆ ನಡೆಸಬೇಕು ಎಂದರು.
ಯತ್ನಾಳ್ ಬಗ್ಗೆ ಮಾತಾಡಲ್ಲ
ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಪಕ್ಷದ ಹೈಕಮಾಂಡ್ ಗೆ ದೂರು ಕೊಡಲು ಹೋಗುವುದಿಲ್ಲ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ
ತಿಳಿಸಿದರು. ಬಸನಗೌಡ ಪಾಟೀಲ್ ಯತ್ನಾಳ್ ಆರೋಪ, ಟೀಕೆ ಕುರಿತಂತೆ ಪ್ರತಿಕ್ರಿಯೆ ನೀಡುವುದಿಲ್ಲ. ಮುಂಬರುವ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದಷ್ಟೇ ಹೇಳಿದರು. ಜಾತಿಗಣತಿ ವಿಚಾರ ಕುರಿತಂತೆ ವಿರೋಧ ವ್ಯಕ್ತವಾಗಿದೆ. ವೈಜ್ಞಾನಿಕವಾಗಿ ಜಾತಿಗಣತಿ ಆಗಬೇಕು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿ ಬರುತ್ತಿದೆ. ನಮ್ಮದೂ ಸಹ ಇದೇ ಅಭಿಪ್ರಾಯವಾಗಿದೆ. ಜನರ ವಿರೋಧದ ನಡುವೆಯೇ ಸರ್ಕಾರ ಯಾವುದೇ ಕಾರಣಕ್ಕೂ ವರದಿ ಅಂಗೀಕರಿಸಬಾರದು ಎಂದು ಅಭಿಪ್ರಾಯಪಟ್ಟರು.