ನೂತನ ಪದಾಧಿಕಾರಿಗಳ ಆಯ್ಕೆ

ಬ್ಯಾಡಗಿ,ಜು6 :ಬರುವ 2023-24ನೇ ಸಾಲಿಗೆ ರೋಟರಿ ಸಂಸ್ಥೆ ನೂತನ ಅಧ್ಯಕ್ಷರಾಗಿ ರೋ.ಮಾಲತೇಶ ಉಪ್ಪಾರ ಕಾರ್ಯದರ್ಶಿ ಯಾಗಿ ರೋ.ಅನಿಲಕುಮಾರ ಬೊಡ್ಡಪಾಟಿ ಆಯ್ಕೆಯಾಗಿದ್ದಾಗಿ ನಿರ್ಗಮಿತ ಅಧ್ಯಕ್ಷ ಮಂಜುನಾಥ ತಿಳಿಸಿದರು.
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆ ನಿಯಮದಂತೆ ನೂತನ ಅಧ್ಯಕ್ಷರ ಅವಧಿ ಒಂದು ವರ್ಷದವರೆಗೆ ಇರಲಿದ್ದು 2024 ಜೂ.30 ಪೂರ್ಣಗೊಳ್ಳಲಿದೆ ಎಂದರು.
ಕಳೆದ ಅವಧಿಯಲ್ಲಿ ಸದಸ್ಯರ ಹಾಗೂ ಸಾರ್ವಜನಿಕರ ಅಧಿಕಾರಿಗಳ ಸಹಕಾರದೊಂದಿಗೆ ರೋಟರಿ ಕ್ಲಬ್ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುವಂತೆ ಮಾಡಲಾಗಿತ್ತು, 20 ಕ್ಕೂ ಹೆಚ್ಚು ಬಾರಿ ಉಚಿತ ಆರೋಗ್ಯ ಶಿಬಿರಗಳು, 2 ಬಾರಿ ರಕ್ತದಾನ ಶಿಬಿರ ಸೇರಿದಂತೆ ಅಂಗವಿಕಲರಿಗೆ ವೀಲ್ ಚೇರ್, ಶೈಕ್ಷಣಿಕವಾಗಿ ಪ್ರತಿಭಾ ಪುರಸ್ಕಾರ, ಪುಸ್ತಕಗಳ ವಿತರಣೆ, ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿದೆ, ಜಿಲ್ಲಾ ಘಟಕದ ಸಹಕಾರದೊಂದಿಗೆ ಬಂಕಾಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ 112 ಕಂಪ್ಯೂಟರ್ ವಿತರಿಸಿದ್ದು ಹೆಮ್ಮೆಯ ವಿಷಯ ಎಂದರು.
ನಿಗದಿತ ಕಾರ್ಯಕ್ರಮಗಳ ಮುಂದುವರಿಕೆ:ನೂತನ ಅಧ್ಯಕ್ಷ ರೋ.ಮಾಲತೇಶ ಉಪ್ಪಾರ ಮಾತನಾಡಿ, ಕ್ರೀಯಾಶೀಲತೆಗೆ ಇನ್ನೊಂದು ಹೆಸರೇ ರೋಟರಿ ಕ್ಲಬ್, ಹೀಗಾಗಿ ಕಳೆದ ವರ್ಷಗಳಲ್ಲಿ ಮಾಡಿದ್ದ ನಿಗದಿತ ಕಾರ್ಯಕ್ರಮಗಳನ್ನು ಪ್ರಸಕ್ತ ಸಾಲಿ ನಲ್ಲಿಯೂ ಮುಂದುವರೆಸಿಕೊಂಡು ಹೋಗುವ ಭರವಸೆ ನೀಡಿದ ಅವರು, ಕಳೆದ ಸಾಲಿನ ಸಮಿತಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಜುಲೈ 13 ರಂದು ಪದಗ್ರಹಣ ಸಮಾರಂಭ:ಕಾರ್ಯದರ್ಶಿ ರೋ.ಅನಿಲಕುಮಾರ ಬೊಡ್ಡಪಾಟಿ ಮಾತನಾಡಿ, ಬರುವ 13 ರಂದು ಪಟ್ಟಣದ ಬಿಇಎಸ್‍ಎಂ.ಮಹಾವಿದ್ಯಾಲಯದ ಸಭಾಭವನದಲ್ಲಿ ಸಂಜೆ 6 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಲಿದ್ದು, ಸದರಿ ಕಾರ್ಯಕ್ರಮಕ್ಕೆ ಕೊಲ್ಲಾಪುರದ (ಮಹಾರಾಷ್ಟ್ರ) ಡಿಸ್ಟ್ರಿಕ್ ಗೌರ್ವನರ್ ನಾಸಿರ್ ಬೋರ್ಸ್‍ಡ್‍ವಾಲಾ ಆಗಮಿಸಲಿದ್ದಾರೆ ಎಂದರು. ಈ ವೇಳೆ ನೂತನ ಪದಾಧಿಕಾರಿಗಳಾದ ಉಪಾಧ್ಯಕ್ಷ ಸತೀಶ ಅಗಡಿ, ಖಜಾಂಚಿ, ನಿರಂಜನ ಶೆಟ್ಟಿಹಳ್ಳಿ, ಜಂಟೀ ಕಾರ್ಯದರ್ಶಿ ವಿರೇಶ ಬಾಗೋಜಿ, ಅಸಿಸ್ಟೆಂಟ್ ಗರ್ವನರ್ ಮಾಲತೇಶ ಅರಳೀಮಟ್ಟಿ ಉಪಸ್ಥಿತರಿದ್ದರು.