ನೂತನ ತಹಶೀಲ್ದಾರ ಪ್ರಸಾದ ಅಧಿಕಾರ ಸ್ವೀಕಾರ

ಬ್ಯಾಡಗಿ,ಅ.29: ತಾಲೂಕಿನ ನೂತನ ಗ್ರೇಡ್1 ತಹಶೀಲ್ದಾರರಾಗಿ ಎಸ್.ಎ.ಪ್ರಸಾದ್ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಕಳೆದ ಆರು ತಿಂಗಳ ಹಿಂದೆಯಷ್ಟೇ ತಾಲೂಕಿನ ತಹಶೀಲ್ದಾರರಾಗಿ ವರ್ಗಾವಣೆಗೊಂಡು ಬಂದಿದ್ದ ವೈ.ತಿಪ್ಪೇಸ್ವಾಮಿ ಅವರನ್ನು ಕಾರ್ಯಭಾರ ಒತ್ತಡದ ಹಿನ್ನಲೆಯಲ್ಲಿ ಹೊನ್ನಾಳಿ ತಾಲೂಕಿಗೆ ವರ್ಗಾವಣೆಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ಎಸ್.ಎ.ಪ್ರಸಾದ್ ಅವರನ್ನು ತಹಶೀಲ್ದಾರನ್ನಾಗಿ ನೇಮಕ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.
ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕಾರ ಮಾಡಿದ ಎಸ್.ಎ.ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಉತ್ತಮ ಆಡಳಿತ ನಡೆಸುವುದು ಸೇರಿದಂತೆ ಅಗತ್ಯ ಸುಧಾರಣೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರಲ್ಲದೇ, ಸಾರ್ವಜನಿಕರು, ಜನಪ್ರತಿನಿಧಿಗಳು ಸೇರಿದಂತೆ ಸಿಬ್ಬಂದಿಗಳು ನಮ್ಮೊಂದಿಗೆ ಜನಪರ ಆಡಳಿತಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.
ಹೊನ್ನಾಳಿ ತಾಲೂಕಿಗೆ ವರ್ಗಾವಣೆಗೊಂಡಿರುವ ತಹಶೀಲ್ದಾರ ವೈ.ತಿಪ್ಪೇಸ್ವಾಮಿ ಮಾತನಾಡಿ, ಕಳೆದ ಆರು ತಿಂಗಳುಗಳಿಂದ ತಾಲೂಕಿನಲ್ಲಿ ತಾವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದು, ಆಡಳಿತದ ಅವಧಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಕರಿಸಿದ ಎಲ್ಲಾ ಸಿಬ್ಬಂದಿಗಳಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ ಗವಿಸಿದ್ಧಪ್ಪ ದ್ಯಾಮಣ್ಣನವರ, ಪುರಸಭಾ ಮುಖ್ಯಾಧಿಕಾರಿ ಏಸು ಬೆಂಗಳೂರು, ಉಪತಹಶೀಲ್ದಾರ ಪಿ.ಎಂ.ಜರ್ಮಲಿ, ಶಿರಸ್ತೇದಾರರಾದ ಎಸ್.ಎನ್.ಮಲ್ಲಾಡದ, ಆರ್.ಎ.ಕಡಕೋಳ, ಕಂದಾಯ ನಿರೀಕ್ಷಕರಾದ ರಾಘವೇಂದ್ರ ಕುಲಕರ್ಣಿ, ಆರ್.ಸಿ.ದ್ಯಾಮನಗೌಡ್ರ, ಆಹಾರ ನಿರೀಕ್ಷಕ ಪಿ.ಎಂ.ದೊಡ್ಡಮನಿ, ಸಿಬ್ಬಂದಿಗಳಾದ ಗುಂಡಪ್ಪ ಹುಬ್ಬಳ್ಳಿ, ನಾಗರಾಜ ಬೇಗೂರು, ನಾಗರಾಜ ಕಟ್ಟಿಮನಿ ಸೇರಿದಂತೆ ಕಂದಾಯ ಇಲಾಖೆಯ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.